ಕಾಂಗ್ರೆಸ್‌ನಿಂದ ಮತ್ತಷ್ಟು ಮುಖಂಡರು ಹೋದರೂ ಚಿಂತೆ ಇಲ್ಲ. ಕಾರ್ಯಕರ್ತರ ಬಲದೊಂದಿಗೆ ಪಕ್ಷ ಬಲಿಷ್ಠವಾಗಲಿದೆಯೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಆಪರೇಷನ್ ಕಮಲ, ಶಿಕ್ಷಣದಲ್ಲಿ ಕೇಸರೀಕರಣ, ರೈತರ ಮೇಲೆ ಹಲ್ಲೆ, ಚರ್ಚ್‌ಗಳ ಮೇಲೆ ದಾಳಿ ನಡೆಸಿದ ಆಡಳಿತಾರೂಢ ಬಿಜೆಪಿಯ ಕಾರ್ಯವೈಖರಿ ಬಗ್ಗೆ ವಾಗ್ದಾಳಿ ನಡೆಸಿದರು.
ಸಾಮಾಜಿಕ ಚಿಂತನೆ ಇಲ್ಲದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ. ಭಯೋತ್ಪಾದನೆ ನಿಗ್ರಹ ನೆಪದಲ್ಲಿ ಶಿಕ್ಷಣ ರಂಗವನ್ನು ಕೇಸರೀಕರಣ ಮಾಡಲು ಹೊರಟಿದೆ. ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿರುವುದು ಸರ್ಕಾರದ ಸಾಧನೆಯಾಗಿದೆ ಎಂದರು.
ಜೆಡಿಎಸ್ ಬಿಜೆಪಿ ಮತ್ತು ಬಿಜೆಪಿ ಅಧಿಕಾರವಧಿಯಲ್ಲಿ ರಾಜ್ಯ 25 ವರ್ಷಗಳಷ್ಟು ಹಿಂದಕ್ಕೆ ಹೋಗಿದೆಯೆಂದು ದೂರಿದ ಅವರು, ರಾಜ್ಯದ ಜನತೆಗೆ ಹಲವಾರು ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಯಾವುದೇ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲವೆಂದು ದೂರಿದರು.
ಯುಪಿಎ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು. |