ಭಯೋತ್ಪಾದನಾ ಜಾಗೃತಿ ಅಭಿಯಾನದ ವಿರುದ್ಧದ ಕಾಂಗ್ರೆಸ್ ಹೋರಾಟ ತೀವ್ರ ಸ್ವರೂಪ ತಾಳಿದ್ದು, ಗುರುವಾರ ಮತ್ತೆ ಪ್ರತಿಭಟನೆಗೆ ಮುಂದಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಭೈರೇಗೌಡರನ್ನು ಪೊಲೀಸರು ಬಂಧಿಸಿದ್ದಾರೆ.ಬುಧವಾರ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಭಯೋತ್ಪಾದನಾ ಜಾಗೃತಿ ಅಭಿಯಾನ ಕುರಿತು ನಡೆಯುತ್ತಿದ್ದ ಸಭೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ಸುಮಾರು 20 ಮಂದಿಯನ್ನು ಬಂಧಿಸಿದ್ದರು.ಆಡಳಿತಾರೂಢ ಬಿಜೆಪಿ ಸರ್ಕಾರ ಭಯೋತ್ಪಾದನಾ ಜಾಗೃತಿ ಅಭಿಯಾನದ ಹೆಸರಲ್ಲಿ ಶಿಕ್ಷಣದ ಕೇಸರೀಕರಣಕ್ಕೆ ಹೊರಟಿದೆ ಎಂದು ಡಿ.ಕೆ.ಶಿವಕುಮಾರ್ ಗಂಭೀರವಾಗಿ ಆರೋಪಿಸಿದ್ದು,ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ನಿನ್ನೆ ಗುಡುಗಿದ್ದರು. ಇಂದು ಬೆಳಿಗ್ಗೆ ಸರ್ಕಾರದ ಧೋರಣೆ ಹಾಗೂ ಅಭಿಯಾನ ಕಾರ್ಯಕ್ರಮದ ವಿರುದ್ಧ ಪ್ರತಿಭಟನೆಗೆ ಇಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆಶಿ ಹಾಗೂ ಯುವ ಕಾಂಗ್ರೆಸ್ ಮುಖಂಡ ಕೃಷ್ಣಭೈರೇಗೌಡ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸುವ ಮೂಲಕ ಪ್ರಕರಣ ಮತ್ತಷ್ಟು ಗಂಭೀರವಾಗಿ ಲಕ್ಷಣ ಗೋಚರಿಸತೊಡಗಿದೆ.ಅಡ್ಡಿ ಪಡಿಸಿದರೆ ಕಠಿಣ ಕ್ರಮ: ಭಯೋತ್ಪಾದನಾ ಜಾಗೃತಿ ಅಭಿಯಾನ ಮಾಡುವುದು ನಮ್ಮ ಕರ್ತವ್ಯವಾಗಿದೆ, ಅದಕ್ಕೆ ಎಲ್ಲ ರಾಜಕಾರಣಿಗಳು ಬೆಂಬಲ ನೀಡಬೇಕು. ಅದನ್ನು ಬಿಟ್ಟು ಅಡ್ಡಿ ಪಡಿಸುವಂತ ಕಾರ್ಯಕ್ಕೆ ಮುಂದಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆಯನ್ನೂ ನೀಡಿದ್ದರು. |