ನೈಸ್ ವಿವಾದದ ಬಗ್ಗೆ ರಾಜ್ಯ ಹೈಕೋರ್ಟ್‌ಗೆ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿರುವುದಕ್ಕೆ ಸುಪ್ರೀಂಕೋರ್ಟ್ ಬುಧವಾರ ಛೀಮಾರಿ ಹಾಕಿದ ಬೆನ್ನಲ್ಲೇ, ತನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಪೂರ್ಣ ನಂಬಿಕೆ ಇದೆ. ಅಕ್ರಮಗಳನ್ನು ನ್ಯಾಯಾಲಯದ ಗಮನಕ್ಕೆ ತರುವ ಉದ್ದೇಶದಿಂದ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಧೀಶರ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಪತ್ರ ಬರೆಯಲಿಲ್ಲ ಎಂದು ಸಮಜಾಯಿಷಿಕೆ ನೀಡಿದರು.
ನೈಸ್ ವಿವಾದದ ಕುರಿತು ದೇವೇಗೌಡರು ಇತ್ತೀಚೆಗೆ ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು. ಗೌಡರ ಈ ಕ್ರಮಕ್ಕೆ ನ್ಯಾಯಾಧೀಶರು ಅಚ್ಚರಿ ವ್ಯಕ್ತಪಡಿಸಿ, ಏನೇ ಹೇಳುವುದಿದ್ದರು ಕೂಡ ನ್ಯಾಯಾಲಯಕ್ಕೆ ಹಾಜರಾಗಿ ತಿಳಿಸಿ ಎಂದು ನೋಟಿಸ್ ಜಾರಿ ಮಾಡಿತ್ತು.
ಅದರಂತೆ ನ್ಯಾಯಾಲಯಕ್ಕೆ ಗೌಡರು ಹಾಜರಾಗಿದ್ದರು. ಪ್ರಕರಣವನ್ನು ನ್ಯಾಯಾಲಯ ಲೋಕಾಯುಕ್ತಕ್ಕೆ ಒಪ್ಪಿಸಿ, ನೈಸ್ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದ್ದರು.
ಆದರೆ ಬುಧವಾರ ನೈಸ್ ವಿವಾದದ ಕುರಿತು ಸರ್ವೋಚ್ಛನ್ಯಾಯಾಲಯದಲ್ಲಿ ದಾಖಲಾಗಿದ್ದ ಅರ್ಜಿಯ ಕುರಿತು ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ, ಗೌಡರ ಪತ್ರ ಪ್ರಕರಣಕ್ಕೆ ಸುಪ್ರೀಂ ನ್ಯಾಯಪೀಠ ಛೀಮಾರಿ ಹಾಕಿತ್ತು. |