ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭಯೋತ್ಪಾದಕ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಕಟುವಾಗಿ ಟೀಕಿಸಿದ್ದಾರೆ.ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೆಡೆ ಬಿಚ್ಚುತ್ತಿದೆ ಎಂದು ಜನರು ಹೇಳುತ್ತಾರೆ. ಆದರೆ, ಶ್ರೀರಾಮ ಸೇನೆಯಂತಹ ಸಂಘಟನೆ ಹಾಗೂ ಮುತಾಲಿಕ್ ಅವರಂತಹವರು ಭಯೋತ್ಪಾದನೆ ಹರಡುತ್ತಿದ್ದಾರೆ. ಮುತಾಲಿಕ್ ಕೂಡಾ ಒಬ್ಬ ಭಯೋತ್ಪಾದಕ . ಇಂತಹ ಸಂಘಟನೆ ಹಾಗೂ ವ್ಯಕ್ತಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಮಂಗಳೂರಿನ ಪ್ರೊಫೆಸರ್ ಪಟ್ಟಾಭಿರಾಮ ಸೋಮಯಾಜಿಗೆ ನೀಡಿರುವ ನೊಟೀಸ್ ವಾಪಸ್ ಪಡೆಯುವಂತೆ ಅವರು ರಾಜ್ಯಪಾಲರಿಗೆ ಮನವಿ ಮಾಡಿದರು. ಮಂಗಳೂರು ಪಬ್ ಘಟನೆ ಖಂಡಿಸಿದ ನಂತರ ಸೋಮಯಾಜಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಿಂದು ವಿರೋಧಿ ಎಂದು ಆರೋಪಿಸಿ, ಎಬಿವಿಪಿ ಕಾರ್ಯಕರ್ತರು ಅವರ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಸೋಮಯಾಜಿಗೆ ನೊಟೀಸ್ ಜಾರಿ ಮಾಡಿತ್ತು. ಮುತಾಲಿಕ್ ಹೇಳಿಕೆ: ಮಂಗಳೂರು ಪಬ್ ಪ್ರಕರಣದಂತೆ ನಾನು ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಭಾರತೀಯ ಸಂಸ್ಕೃತಿ ಹಾಗೂ ಗುರುತನ್ನು ರಕ್ಷಿಸುವ ಹೋರಾಟದಲ್ಲಿ ನಾನು ಕಾನೂನಿಗನುಗುಣವಾಗಿ ನಡೆದುಕೊಳ್ಳಲಿದ್ದೇವೆ. ಪ್ರಮುಖ ರೆಸ್ಟೋರೆಂಟ್‌ಗಳ ಎದುರು ನಾವು ಶಾಂತ ರೀತಿಯಿಂದ ಪ್ರತಿಭಟನೆ ನಡೆಲಿದ್ದೇವೆ ಎಂದು ಮುತಾಲಿಕ್ ಹೇಳಿದ್ದಾರೆ. |