ಮಂಗಳೂರು ಎಮ್ನೇಶಿಯ ಪಬ್ ದಾಳಿ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೈವಾಡ ಇರುವ ಮಾಹಿತಿ ಲಭಿಸಿದೆ ಎಂದು ಗೃಹಸಚಿವ ಡಾ.ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಳಿ ಮಾಡಿದ ಗುಂಪಿನಲ್ಲಿ ಕಾಂಗ್ರೆಸ್‌ನ ಕಾರ್ಪೋರೇಟರ್ ಒಬ್ಬರ ಪತಿಯೂ ಇದ್ದರು.ಅವರು ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರು ಹೌದು, ಶ್ರೀರಾಮಸೇನೆಯ ಕಾರ್ಯಕರ್ತರೂ ಹೌದು. ದಾಳಿಯ ನಂತರ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದರು.
ಪಬ್ ಮೇಲಿನ ದಾಳಿ ಮತ್ತು ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳು ತನಿಖೆ ವೇಳೆ ದೊರೆತಿದೆ. ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಅಲ್ಲದೇ ತಮ್ಮ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಇದುವರೆಗೆ ಹುಡುಗಿಯರು ಯಾವುದೇ ದೂರು ನೀಡಿಲ್ಲ. ಅಲ್ಲದೇ, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಯಾವುದೇ ವಿವರಗಳನ್ನು ನೀಡಲು ಸಹಕರಿಸುತ್ತಿಲ್ಲ ಎಂದು ದೂರಿದರು. |