ಮಠಾಧೀಶರು ನಮ್ಮ ಶತ್ರು ಎಂದು 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಎಲ್.ಬಸವರಾಜು ಅವರು ನೀಡಿರುವ ಹೇಳಿಕೆಗೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿ, ಅವರು ಏಕೆ ಹಾಗೆ ಹೇಳಿದರೋ ಗೊತ್ತಿಲ್ಲ, ಸಾಹಿತಿಗಳು ಒಂದು ಸ್ಥಾನಮಾನ ಪಡೆದಿದ್ದರೆ ಅದು ಮಠಾಧೀಶರು ನಡೆಸುತ್ತಿರುವ ಶಾಲೆ, ಕಾಲೇಜುಗಳಿಂದ ಎಂದು ತಿರುಗೇಟು ನೀಡಿದ್ದಾರೆ.
ಸಾಹಿತ್ಯ ಸಮ್ಮೇಳನಕ್ಕೆ ಮಠಾಧೀಶರು ಬರುವುದು ಬೇಡ ಎಂದು ಅವರು ಹೇಳುವುದಾದರೆ, ಚಿತ್ರದುರ್ಗದಲ್ಲಿ ಮಠಾಧೀಶರುಗಳೇ ಸಮ್ಮೇಳನ ನಡೆಸುತ್ತಿದ್ದಾರೆ ಎಂದು ತಿಳಿದ ಮೇಲೂ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾದರೂ ಏಕೆ?ಆ ಸ್ಥಾನವನ್ನು ತಿರಸ್ಕರಿಸಿ ಮೈಸೂರಿನಲ್ಲೇ ಇರಬಹುದಾಗಿತ್ತು. ಇಲ್ಲಿಗೆ ಬರಬಾರದಿತ್ತು ಎಂದು ತರಬಾಳು ಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಸವರಾಜು ಅವರಿಗೆ ಮಠಗಳು ಶತ್ರುಗಳಾಗಿದ್ದರೆ, ಅವರು ರಚಿಸಿರುವ ಕೃತಿಯನ್ನು ಚಿತ್ರದುರ್ಗದ ಬೃಹನ್ಮಠದಿಂದ ಪ್ರಕಟಿಸಿರುವುದಾದರೂ ಏಕೆ ?ಅವರ ಶಬ್ದಮಣಿ ದರ್ಪಣ, ಶೂನ್ಯ ಸಂಪಾದನೆ ಕೃತಿಗಳ ಬಿಡುಗಡೆಗೆ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳ ಕೊಡುಗೆ ಇದೆ ಎಂಬುದನ್ನು ಮರೆಯಬಾರದು ಎಂದರು.
ಹಲವರು ತಮಗೆ ಸಮ್ಮೇಳನವನ್ನು ಬಹಿಷ್ಕರಿಸಿ ಎಂದು ಕೇಳಿಕೊಂಡಿದ್ದರು. ಬಸವರಾಜು ಅವರು ನೀಡಿರುವ ಹೇಳಿಕೆಯನ್ನು ಕಡೆಗಣಿಸಿ ಹೋಗದಿರಬಹುದಿತ್ತು. ಹಾಗೆ ಮಾಡಿದ್ದರೆ ಅವರ ಹೇಳಿಕೆಗೆ ಮನ್ನಣೆ ನೀಡಿದಂತಾಗುತ್ತಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. |