ಮುಂದಿನ ದಿನಗಳಲ್ಲಿ ಹಾಸನ, ಕೋಲಾರ, ಗುಲ್ಬರ್ಗ ಜಿಲ್ಲೆಗಳಲ್ಲಿ ಆಪರೇಷನ್ ಕಮಲ ಮುಂದುವರಿಯಲಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಪಕ್ಷ ಇದಕ್ಕೆ ಬೇಕಾದ ಪೂರ್ವ ಸಿದ್ಧತೆಗಳಲ್ಲಿ ತೊಡಗಿದೆ ಎಂದ ಅವರು, ಈ ಕಾರ್ಯಾಚರಣೆಗೆ ಯಾವ ಮುಖಂಡರು ಸಿಕ್ಕಿ ಬೀಳುವರು ಎಂಬುದನ್ನು ಕಾದು ನೋಡಿ. ಕೆಲವೇ ದಿನಗಳಲ್ಲಿ ತಿಳಿಯುತ್ತದೆ. ಆಪರೇಷನ್ ನಡೆಸುವ ಜವಾಬ್ದಾರಿ ಕೆಲ ಸಚಿವರಿಗೆ ನೀಡಲಾಗಿದೆ. ಆ ಸಚಿವರು ನೀಡುವ ವರದಿ ಮೇಲೆ ಇತರ ಪಕ್ಷದ ಮುಖಂಡರನ್ನು ಸೆಳೆಯಲಾಗುವುದು ಎಂದರು.
ತಮ್ಮ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡ ಅವರು, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಧ್ರುವೀಕರಣ ನಡೆಯುತ್ತದೆ. ಈ ಕಾಲಕ್ಕೆ ಬೇರೆ ಪಕ್ಷಗಳಿಗೆ ಮುಖಂಡರು ಹೋಗುವುದು-ಬರುವುದು ಸಾಮಾನ್ಯ. ಈ ಸಾಮಾನ್ಯ ಪ್ರಕ್ರಿಯೆಯನ್ನು ಆಪರೇಷನ್ ಕಮಲದಡಿ ಬಿಜೆಪಿಯೂ ನಡೆಸುತ್ತಿದೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಕೆಜಿಎಫ್ ಶಾಸಕ ವೈ.ಸಂಪಂಗಿ ವಿರುದ್ಧ ನಡೆಯುತ್ತಿರುವ ವಿಚಾರಣೆಯಲ್ಲಿ ಪಕ್ಷ ನೇರವಾಗಿ ಅಥವಾ ಪರೋಕ್ಷವಾಗಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು. ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಜರುಗಿಸಲಿದ್ದಾರೆ ಎಂದು ಹೇಳಿದರು. |