ರಾಮನಗರದ ಸಾವದುರ್ಗ ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟ ಚಿರತೆಯೊಂದು ಬ್ಯಾಡರಹಳ್ಳಿ ಸುತ್ತಮುತ್ತಲ ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಹಲವರನ್ನು ಗಾಯಗೊಳಿಸಿದೆ. ಇಲ್ಲಿನ ಅಂಜನಾ ನಗರಕ್ಕೆ ನುಗ್ಗಿದ ಚಿರತೆ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿದೆ.
ಕೆಂಪೇಗೌಡ ನಗರದ ಪ್ರಕಾಶ್, ಕುಮಾರ್ ಹಾಗೂ ಐಎಂಬಿಎ ಲೇಔಟ್ ನಿವಾಸಿ ಹರ್ಷ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಜನಾನಗರ ಕೆಂಪೇಗೌಡ ನಗರದಲ್ಲಿ ರಾತ್ರಿ ಊಟ ಮುಗಿಸಿ ಸ್ನೇಹಿತನ ಮನೆಗೆ ತೆರಳುತ್ತಿದ್ದ ಪ್ರಕಾಶ್ ಎಂಬುವರ ಮೇಲೆ ಇದಕ್ಕಿದ್ದಂತೆ ಚಿರತೆ ದಾಳಿ ನಡೆಸಿತ್ತು. ರಸ್ತೆಯ ದೂರದಲ್ಲಿ ನಿಂತಿದ್ದ ಆಟೋ ಚಾಲಕ ಕುಮಾರ್ ಎಂಬಾತನ ಮೇಲೂ ಎಗರಿ ದಾಳಿ ನಡೆಸಿ ಪರಾರಿಯಾಯಿಗಿತ್ತು.
ಕೆಂಪೇಗೌಡನಗರದಲ್ಲಿ ಎರಡನೆ ದಾಳಿಗೆ ಒಳಗಾದ ಕುಮಾರ್ ಚಿರತೆ ದಾಳಿಯನ್ನು ಸುತ್ತಲ ಜನರಿಗೆ ತಿಳಿಸಿದರು. ಕೂಡಲೇ ಜಾಗೃತರಾದ ಜನ ಪಂಜಿನ ಮೂಲಕ ಚಿರತೆಯ ಶೋಧ ನಡೆಸಲು ಆರಂಭಿಸಿದರು. ಆಗ ಬೆಂಗಳೂರು-ಮಾಗಡಿ ಮುಖ್ಯ ರಸ್ತೆಯನ್ನು ದಾಟಿದ ಚಿರತೆ ರಸ್ತೆ ಪಕ್ಕದಲ್ಲಿ ಬೈಕ್‌ನಲ್ಲಿ ಕುಳಿತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಹರ್ಷ ಎಂಬ ಯುವಕನ ಮೇಲೆ ದಾಳಿ ಮಾಡಿತು. ಆತನ ಹೆಗಲು ಹಾಗೂ ಕೈಗಳನ್ನು ಪರಚಿ ಗಾಯಗೊಳಿಸಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಶೋಧ ನಡೆಸಿದರೂ ಚಿರೆತೆ ಪತ್ತೆಯಾಗಲಿಲ್ಲ.
|