ವ್ಯಾಲೆಂಟೈನ್ಸ್ ದಿನದಂದು ಡೇಟಿಂಗ್ ಮಾಡುತ್ತಿರುವ ಜೋಡಿಗಳಿಗೆ ಮದುವೆ ಮಾಡಿಸಿಬಿಡುವುದಾಗಿ ಎಚ್ಚರಿಕೆ ನೀಡಿರುವ ಶ್ರೀರಾಮ ಸೇನೆಗೆ ಎಚ್ಚರಿಕೆ ಸಂದೇಶ ನೀಡಿರುವ ಕರ್ನಾಟಕ ಸರಕಾರ, ಅವರು ಕಾನೂನನ್ನು ಕೈಗೆತ್ತಿಕೊಂಡಿದ್ದೇ ಆದರೆ, ಕಾನೂನು ತನ್ನ ಕ್ರಮದಲ್ಲಿ ಮುಂದುವರಿಯುತ್ತದೆ ಎಂದು ಎಚ್ಚರಿಸಿದೆ.
'ಅವರು ಅನವಶ್ಯವಾಗಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅವರು ಕಾನೂನನ್ನು ತಮ್ಮ ಕೈಗೆತ್ತಿಕೊಂಡರೆ, ಕಾನೂನು ತನ್ನದೇ ಕ್ರಮ ಮುಂದುವರಿಸಲಿದೆ' ಎಂದು ಮದುವೆ ಮಾಡಿಸುವ ಎಚ್ಚರಿಕೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಾಜ್ಯ ಗೃಹ ಸಚಿವ ವಿ.ಎಸ್.ಆಚಾರ್ಯ ಹೇಳಿದರು.
ಜನವರಿ 24ರಂದು ಮಂಗಳೂರಿನ ಪಬ್‌ನಲ್ಲಿ ನಡೆದ ದಾಂಧಲೆಯನ್ನು ಉಲ್ಲೇಖಿಸಿದ ಅವರು, ಈ ಘಟನೆಯಲ್ಲಿ ಕೆಲವು ಕಾಂಗ್ರೆಸ್ ನಾಯಕರ ಕೈವಾಡವಿರುವುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದರು.
ದಾಳಿಗೆ ಈಡಾದ ಹುಡುಗಿಯರ ಗುರುತು ಪತ್ತೆಯಾಗಿದೆ, ಆದರೆ ಅವರು ಅಧಿಕೃತವಾಗಿ ದೂರು ನೀಡಲು ಅಥವಾ ಯಾವುದೇ ವಿವರ ಹಂಚಿಕೊಳ್ಳಲು ನಿರಾಕರಿಸಿದ್ದಾರೆ ಎಂದ ಆಚಾರ್ಯ, ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ ಎಂದರು. ಶ್ರೀರಾಮ ಸೇನೆಯ ಕಾರ್ಯಕರ್ತನೂ ಆಗಿರುವ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಈ ಘಟನೆ ನಡೆದಂದಿನಿಂದ ತಲೆಮರೆಸಿಕೊಂಡಿದ್ದಾರೆ ಎಂದೂ ಆಚಾರ್ಯ ನುಡಿದರು. |