ಪ್ರೇಮಿಗಳ ದಿನಾಚರಣೆಯಂದ ಸಿಕ್ಕಿಬೀಳುವ ಜೋಡಿಗೆ ತಾಳಿ ಅಥವಾ ರಾಖಿ ಕಟ್ಟಿಸಲಾಗುವುದು ಎಂಬ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಅನೇಕರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೀತಿಸುವವರು ಮದುವೆಯಾಗಬೇಕು ಎಂದು ಭಾವಿಸುವುದು ಮೂರ್ಖತನದ ಪರಮಾವಧಿ. ಫೆ.14 ರಂದು ಪ್ರೇಮಿಗಳ ದಿನ ಆಚರಿಸಿಕೊಳ್ಳುವ ಎಲ್ಲಾ ಜೋಡಿಗಳಿಗೆ ಪ್ರಗತಿಪರ ಸಂಘಟನೆಗಳೊಂದಿಗೆ ರಕ್ಷಣೆ ನೀಡಲು ನಾವು ಸಿದ್ಧವಿದ್ದೇವೆ ಎಂದು ಪತ್ರಕರ್ತ ಅಗ್ನಿ ಶ್ರೀಧರ್ ಹೇಳಿದ್ದಾರೆ. ಪ್ರೇಮಿಗಳ ದಿನ ಆಚರಿಸಿಕೊಳ್ಳಲು ಯುವ ಜೋಡಿಗಳಿಗೆ ಸ್ವಾತಂತ್ರ್ಯವಿದೆ. ಆದರೆ ಅವರ ಮೇಲೆ ದಾಳಿ ನಡೆಸುವುದಾಗಿ, ವಿವಾಹ ಬಂಧನಕ್ಕೆ ಒಳಪಡಿಸುವುದಾಗಿ ಶ್ರೀರಾಮಸೇನೆ ಹೇಳಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧ. ಒಂದು ವೇಳೆ ಇದು ಸಂಸ್ಕೃತಿಗೆ ವಿರುದ್ಧ ಎಂದು ಶ್ರೀರಾಮ ಸೇನೆ ಭಾವಿಸುವುದಾದರೆ ವಿರೋಧ ವ್ಯಕ್ತಪಡಿಸಲು ಬೇರೆ ಮಾರ್ಗಗಳಿವೆ. ಅದು ಬಿಟ್ಟು ಕ್ಯಾಮೆರಾ ಸಮೇತ ದಾಳಿ ನಡೆಸುತ್ತೇವೆ ಎನ್ನುವುದು ಅವಿವೇಕಿಗಳ ಮಾತು ಎಂದು ಅವರು ಕಿಡಿಕಾರಿದ್ದಾರೆ. ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಇವರು ಶಿಲಾಯುಗಕ್ಕೆ ಕೊಂಡೊಯ್ಯುತ್ತಿದ್ದಾರೆ. ರಾಖಿ ಕಟ್ಟಿ ಇಲ್ಲ ತಾಳಿ ಕಟ್ಟಿ ಎನ್ನಲು ಇವರು ಯಾರು ? ಸಂಸ್ಕೃತಿಯ ರಕ್ಷಣೆಯನ್ನು ಇವರು ಗುತ್ತಿಗೆ ಪಡೆದಿದ್ದಾರೆಯೇ ? ಎಂದಿದ್ದಾರೆ. ಅಂತೂ ಮುತಾಲಿಕ್ ಹೇಳಿಕೆಯಿಂದ ವ್ಯಾಲೆಂಟೇನ್ ಡೇ ಮೂಡ್‌ನಲ್ಲಿದ್ದ ಪ್ರೇಮಿಗಳಿಗೆ ಗೊಂದಲ ಉಂಟಾಗಿದ್ದಂತು ನಿಜ. |