ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಯೋತ್ಪಾದನೆ ದಮನಕ್ಕೆ ದೇಶದಲ್ಲಿ ಭಯೋತ್ಪಾದನಾ ವಿರೋಧಿ ಪ್ರಚಾರಾಂದೋಲನ ಹಮ್ಮಿಕೊಳ್ಳುವುದು ಹಾಗೂ ವಿಶ್ವ ಸಂಸ್ಥೆಯಿಂದ ಭಯೋತ್ಪಾದನೆ ನಿಗ್ರಹ ದಳ ಸ್ಥಾಪನೆ ಅತ್ಯಗತ್ಯವಾಗಿದೆ ಎಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಕರೆ ನೀಡಿದ್ದಾರೆ.
ನಗರದ ಬಿ.ವಿ.ಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಡಾ.ಆರ್.ಎಚ್.ಕುಲಕರ್ಣಿ ಸಂಸ್ಮರಣಾ ಉಪನ್ಯಾಸ ಗೃಹ ಹಾಗೂ ದೇಶಪಾಂಡೆ ಸೆಂಟರ್ ಫಾರ್ ಸೋಶಿಯಲ್ ಎಂಟರ್‌ಪ್ರಿನ್ಯೂರ್‌ಷಿಪ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಭಯೋತ್ಪಾದನೆ ಕೆಟ್ಟ ಶಕ್ತಿಗಳ ಸಮ್ಮಿಳಿತವಾಗಿದ್ದು, ಅದರ ತಡೆಗೆ ಉತ್ತಮ ಶಕ್ತಿಗಳ ಸಮ್ಮಿಳಿತ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. ಪ್ರಸಕ್ತ ಸ್ಥಿತಿಯಲ್ಲಿ ದೇಶದ ಆರ್ಥಿಕಾಭಿವೃದ್ದಿಯ ಔನತ್ಯಕ್ಕೆ ಅವಶ್ಯಕವಾದದ್ದು, ಸೃಜನಾತ್ಮಕ ನಾಯಕತ್ವ, ಈ ನಿಟ್ಟಿನಲ್ಲಿ ಸೃಜನಾತ್ಮಕ ನಾಯಕ ಸಾಧನೆಯ ಹಾದಿಯಲ್ಲಿ ಓರ್ವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು. |