ಮಂಜೇಶ್ವರ ಶಾಸಕ ಸಿ.ಎಚ್. ಕುಂಞಂಬು ಅವರ ಪುತ್ರಿ ಮತ್ತು ಆಕೆಯ ಅನ್ಯಕೋಮಿನ ಸ್ನೇಹಿತೆಯ ತಮ್ಮನೊಂದಿಗೆ ಪ್ರಯಾಣಿಸುತ್ತಿದ್ದಾಗ ಬಸ್ಸಿನಿಂದ ಎಳೆದು ಹಾಕಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಕೃತ್ಯವನ್ನು ಶ್ರೀರಾಮ ಸೇನೆ ಅಥವಾ ಭಜರಂಗದಳಗಳು ನಡೆಸಿವೆ ಎಂಬುದಾಗಿ ಶಾಸಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೇರಳದ ಮಂಜೇಶ್ವರ ಶಾಸಕ ಕುಂಞಂಬುರವರ ಪುತ್ರಿ ಶ್ರುತಿ ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿ. ಆಕೆ ಮಂಗಳೂರಿಗೆ ಪ್ರಯಾಣಿಸುವ ಸಲುವಾಗಿ ಶುಕ್ರವಾರ ಸಂಜೆ 4.30ರ ಸುಮಾರಿಗೆ ಮಂಜೇಶ್ವರ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಆಕೆಯ ಸ್ನೇಹಿತೆಯ ತಮ್ಮ ಶಾಹಿಬ್ ಎಂಬಾತ ಜತೆಯಾಗುತ್ತಾನೆ. ಆತನೂ ಮಂಗಳೂರಿಗೆ ಹೋಗುವವನಾದ ಕಾರಣ ಇಬ್ಬರೂ ಜತೆಯಾಗಿ 'ವೈಶಾಖ್' ಎಂಬ ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಈ ನಡುವೆ ಬಸ್ ಕಂಡಕ್ಟರ್ ಭಜರಂಗದಳ ಮತ್ತು ಶ್ರೀರಾಮ ಸೇನೆಯವರಿಗೆ ಮೊಬೈಲ್ ಮೂಲಕ ವಿಚಾರ ತಿಳಿಸಿದ್ದಾನೆ ಎಂದು ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಮ್ಯೂನಿಸ್ಟ್ ಕಾರ್ಯಕರ್ತರೊಬ್ಬರು ದೂರಿದ್ದಾರೆ.
ಬಸ್ ಮಂಗಳೂರಿನ ಕಂಕನಾಡಿ ತಲುಪುವಷ್ಟರಲ್ಲಿ ಸುಮಾರು 25ರಿಂದ 30ರ ಹರೆಯದ ನಾಲ್ವರು ವ್ಯಕ್ತಿಗಳು ಬಂದು ಶ್ರುತಿ ಮತ್ತು ಶಾಹಿಬ್‌ನನ್ನು ಬಸ್ಸಿನಿಂದ ಎಳೆದು ಹಾಕಿ ರಿಕ್ಷಾವೊಂದರಲ್ಲಿ ಪಡೀಲ್‌ನ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ದಿಗ್ಬಂಧನ ವಿಧಿಸಿದ್ದಾರೆ. ಅಲ್ಲಿ ಹುಡುಗ-ಹುಡುಗಿಯನ್ನು ತರೇವಾರಿ ಪ್ರಶ್ನೆಗಳನ್ನು ಕೇಳಿದ ಸುಮಾರು ಗಂಟೆಯ ನಂತರ ಬಿಡುಗಡೆ ಮಾಡಲಾಯಿತು ಎಂದು ತಿಳಿದು ಬಂದಿದೆ.
ಅವರು ನನಗೆ ಮತ್ತು ಶಾಹಿಬ್‌ಗೆ ಹಲ್ಲೆ ನಡೆಸಿದ್ದಾರೆ ಎಂದು ಸ್ವತಃ ಶ್ರುತಿ ಆರೋಪಿಸಿದ್ದಾರೆ. ಆದರೆ ಮತ್ತೊಂದು ಮೂಲದ ಪ್ರಕಾರ ಶ್ರುತಿ ಶಾಸಕಿ ಪುತ್ರಿ ಎಂದು ತಿಳಿಯುತ್ತಿದ್ದಂತೆ ಆಕೆಯನ್ನು ಬಿಡುಗಡೆ ಮಾಡಲಾಗಿದೆ. ನಂತರ ಶಾಹಿಬ್‌ಗೆ ಹಲ್ಲೆ ನಡೆಸಲಾಗಿದೆ.
ಈ ಬಗ್ಗೆ ಪೊಲೀಸರಲ್ಲಿ ವಿಚಾರಿಸಿದಾಗ ಯಾರನ್ನೂ ಬಂಧಿಸಿಲ್ಲ ಎಂದಿದ್ದಾರೆ. "ಈ ದಾಳಿ ನಡೆಸಿದವರು ಭಜರಂಗ ದಳದವರೇ ಅಥವಾ ಶ್ರೀರಾಮ ಸೇನೆಯೇ ಎಂದು ಪತ್ತೆ ಹಚ್ಚಲು ಯತ್ನಿಸುತ್ತಿದ್ದೇವೆ" ಎಂದಷ್ಟೇ ತಿಳಿಸಿದ್ದಾರೆ. ಬಸ್ ಕಂಡಕ್ಟರ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿದ್ದು, ಶಾಸಕರು ಇಲ್ಲಿನ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಇದೇ ವೇಳೆ ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆ ರಾಜ್ಯ ಸಂಚಾಲಕ ಪ್ರಸಾದ್ ಅತ್ತಾವರ, "ನಮಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ನಮ್ಮ ಸಂಘಟನೆಗೆ ಮಸಿ ಬಳಿಯಲು ಕಿಡಿಗೇಡಿಗಳು ನಡೆಸಿರುವ ಕೃತ್ಯವಿದು" ಎಂದಿದ್ದಾರೆ.
ಶ್ರುತಿ ತಂದೆ ಕುಂಜಾಂಬು ಪತ್ರಕರ್ತರ ಜತೆ ಮಾತನಾಡುತ್ತಾ, "ಒಬ್ಬ ಮುಸ್ಲಿಮ್ ಹುಡುಗ ಮತ್ತು ಹಿಂದೂ ಹುಡುಗಿ ಮಾತನಾಡುವುದು ಕೇರಳದಲ್ಲಿ ಒಂದು ವಿಷಯವೇ ಅಲ್ಲ. ಯಾವುದೇ ಕಾರಣವಿಲ್ಲದೆ ಗೂಂಡಾಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ಬಸ್‌ನಲ್ಲಿದ್ದ ಕಂಡಕ್ಟರ್ ಬಿಜೆಪಿಗೆ ಸೇರಿದವ. ಆತನೇ ಭಜರಂಗದಳ ಮತ್ತು ಶ್ರೀರಾಮ ಸೇನೆಯವರಿಗೆ ಮೊಬೈಲ್‌ನಲ್ಲಿ ಮಾಹಿತಿ ನೀಡಿದ್ದಾನೆ. ಈ ವಿಚಾರವನ್ನು ಈಗಾಗಲೇ ಕರ್ನಾಟಕ ಗೃಹಸಚಿವರಿಗೆ ತಿಳಿಸಿದ್ದೇನೆ" ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿರುವುದಾಗಿ ತಿಳಿಸಿರುವ ಕರ್ನಾಟಕ ಗೃಹ ಸಚಿವ ವಿ.ಎಸ್. ಆಚಾರ್ಯ, "ದುಷ್ಕರ್ಮಿಗಳು ಯಾರೆಂದು ಗುರುತಿಸಲಾಗಿಲ್ಲ. ನಾವು ಅದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ನನಗೆ ಕೇರಳ ಪೊಲೀಸ್ ಮಹಾನಿರ್ದೇಶಕರು ಮಾಹಿತಿ ನೀಡಿದ ನಂತರ ವಿಷಯ ತಿಳಿಯಿತು" ಎಂದು ಹೇಳಿದ್ದಾರೆ.
ಈ ಸಂಬಂಧ ಪಶ್ಚಿಮವಲಯ ಐಜಿಪಿ ಎ.ಎಮ್. ಪ್ರಸಾದ್ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ದಳವೊಂದನ್ನು ರಚಿಸಿದ್ದು, "ಆ ಹುಡುಗಿಯ ಮುಖಾಂತರ ದೂರವಾಣಿಯಲ್ಲಿ ಮಾತನಾಡಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ" ಎಂದು ತಿಳಿಸಿದರು.
|