ಮೆಜೆಸ್ಟಿಕ್ ಸಮೀಪದ ಉಪ್ಪಾರಪೇಟೆ ಸಮೀಪ ನಟ ವಿನೋದ್ ರಾಜ್ ಅವರ ಮೇಲೆ ಕೊಲೆ ಯತ್ನ ನಡೆಸಿರುವ ಘಟನೆ ಶನಿವಾರ ಬೆಳಿಗ್ಗೆ 9.30ರ ಸುಮಾರಿಗೆ ನಡೆದಿದೆ.ನಟ ವಿನೋದ್ ರಾಜ್, ತಾಯಿ ಲೀಲಾವತಿ ಕಾರಿನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಉಪ್ಪಾರಪೇಟೆಯ ಶಾಂತಲಾ ಸಿಲ್ಕ್ಸ್ ಬಳಿ ಗುಂಡು ಹಾರಿಸಿದ್ದರು. ಗುಂಡು ಕಾರಿನ ಹಿಂಬದಿಯ ಗಾಜಿನ ಮೂಲಕ ಒಳ ತೂರಿ ಬಂದಿತ್ತು ಎಂದು ಹೇಳಲಾಗಿತ್ತು.ಆದರೆ ವಿನೋದ್ ರಾಜ್ ಅವರ ಕಾರಿನ ಮೇಲೆ ಗುಂಡು ಹಾರಾಟ ನಡೆದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಂಕರ ಬಿದರಿ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಕಾರಿನ ಪರಿಶೀಲನೆ ನಡೆಸಿದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವಿಷಯವನ್ನು ಖಚಿತಪಡಿಸಿದ್ದಾರೆ. ಅದು ಗುಂಡಿನ ದಾಳಿ ಅಲ್ಲ, ಕಲ್ಲು ಅಥವಾ ಬೇರೆ ಯಾವುದಾದರು ವಸ್ತುವಿನಿಂದ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ನಟ ವಿನೋದ್ ರಾಜ್, ತಾಯಿ ಲೀಲಾವತಿ, ಕಾರು ಚಾಲಕ ಬಸವರಾಜು, ಮ್ಯಾನೇಜರ್ ನಾಗರಾಜ್ ಅವರ ಹೇಳಿಕೆ ಪಡೆಯಲಾಗಿದೆ. ವಿನೋದ್ ರಾಜ್ ಮತ್ತು ಲೀಲಾವತಿ ಅವರು ತಮಗೆ ಯಾರೂ ದ್ವೇಷಿಗಳಿಲ್ಲ, ಅನುಮಾನನು ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಬಿದರಿ ಹೇಳಿದರು.ನಟ ವಿನೋದ್ ರಾಜ್ ಮೇಲೆ ಗುಂಡು ಹಾರಾಟ ನಡೆಸಲಾಯಿತೇ ಅಥವಾ ದಾಳಿ ನಡೆಸಲು ಕಾರಣವೇನು ಎಂಬ ಬಗ್ಗೆ ಖಚಿತ ಮಾಹಿತಿ ತಿಳಿದು ಬಂದಿಲ್ಲ. ಚಿತ್ರರಂಗ ದಿಗ್ಭ್ರಮೆ: ವಿನೋದ್ ರಾಜ್ ಹಾಗೂ ಲೀಲಾವತಿ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂಬ ಸುದ್ದಿಗೆ ಚಿತ್ರರಂಗದ ಗಣ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅವರ ಪಾಡಿಗೆ ಅವರು ಕೆಲಸ ಮಾಡುತ್ತಿದ್ದು, ಯಾರಿಗೂ ತೊಂದರೆ ಕೊಡದ ಅವರ ಮೇಲೆಯೇ ಈ ರೀತಿ ಹತ್ಯಾ ಪ್ರಯತ್ನ ನಡೆಯುತ್ತಿದೆ ಎಂದರೇ ನಂಬಲೂ ಕಷ್ಟವಾಗುತ್ತಿದೆ ಎಂದು ನಟರಾದ ದ್ವಾರಕೀಶ್, ತಾರಾ, ವಿಜಯ್ ರಾಘುವೇಂದ್ರ ಸೇರಿದಂತೆ ಹಲವು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |