ಇಲ್ಲಿ ನಡೆಯುತ್ತಿರುವ ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಎಲ್.ಬಸವರಾಜು ಅವರ ವಿರುದ್ಧ ತರಳಬಾಳುಶ್ರೀಗಳು ನೀಡಿರುವ ಪ್ರತಿಕ್ರಿಯೆಗೆ ಹೆಸರಾಂತ ವಿಮರ್ಶಕ ಪ್ರೊ.ಕಿ.ರಂ.ನಾಗರಾಜ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯ ಸಮ್ಮೇಳನದ ಮೂರನೇ ದಿನವಾದ ಶುಕ್ರವಾರ ತರಾಸು ಜಿಲ್ಲಾ ರಂಗಮಂದಿರಲ್ಲಿ ನಡೆದ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಹೇಳಿಕೆಯನ್ನು ಕಿಡಿನುಡಿಗಳಿಂದ ಖಂಡಿಸಿ ಮಾತನಾಡಿದ ಅವರು, ಶಿಕ್ಷಕರನ್ನು, ರಾಜಕಾರಣಿಗಳನ್ನು ಪ್ರಶ್ನಿಸುವುದಾದರೆ ಮಠಾಧೀಶರನ್ನೇಕೆ ಪ್ರಶ್ನಿಸಬಾರದು. ಮಠಾಧೀಶರೇನು ದೈವಾಂಶ ಸಂಭೂತರೇ ಎಂದು ಪ್ರಶ್ನಿಸಿದ್ದಾರೆ.
ಪ್ರೊ.ಎಲ್.ಬಸವರಾಜು ಅವರು ಶೋಷಿತರ ಮತ್ತು ಸಾಂಸ್ಕೃತಿಕ ಸಮುದಾಯದ ದನಿಯಾಗಿ ಸಾರ್ವತ್ರಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳಿಂದ ಹಗುರವಾದ ಮಾತನ್ನು ನಿರೀಕ್ಷಿಸಿರಲಿಲ್ಲ. ಟೀಕೆಗಳನ್ನು ಮಠಾಧೀಶರು ಆತ್ಮಾವಲೋಕನಕ್ಕೆ ಬಳಸಿಕೊಳ್ಳಬೇಕೆ ಹೊರತು ರಾಜಕಾರಣಿಗಳ ರೀತಿ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಠಾಧೀಶರನ್ನು ವಿರೋಧಿಸುವುದನ್ನು ಮತ್ತು ಪ್ರೊ.ಎಲ್.ಬಸವರಾಜು ಅವರು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದನ್ನು ತಳಕು ಹಾಕಿ ಮಾತನಾಡುವುದು ಕ್ರೂರವಾದದ್ದು. ಅಧ್ಯಕ್ಷ ಸ್ಥಾನವನ್ನು ಬಸವರಾಜು ಅವರು ಕೇಳಿ ಪಡೆದಿದ್ದು ಅಲ್ಲ ಎಂದು ಹೇಳಿದರು. |