ಕೋಟೆಯ ನಾಡಲ್ಲಿ ನಡೆಯುತ್ತಿರುವ 75ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಗೊಂದಲದ ಬೀಡಾಗುವ ಮೂಲಕ ಅವ್ಯವಸ್ಥೆಯಿಂದಾಗಿ ಸಾಹಿತ್ಯಾಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್ ಪ್ರತಿಭಟನೆ ಎದುರಿಸಲಾಗಿದೆ ಪೊಲೀಸ್ ರಕ್ಷಣೆ ಪಡೆಯಬೇಕಾದ ಪರಿಸ್ಥಿತಿ ಬಂದೊದಗಿತ್ತು.
ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ದಿನವಾದ ಶುಕ್ರವಾರ ಬೆಳಿಗ್ಗಿನಿಂದಲೇ ಅಸಮಾಧಾನ ಭುಗಿಲೆದ್ದಿತು. ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳು ರೊಚ್ಚಿಗೆದ್ದು ರಸ್ತೆಗಿಳಿದು ಬೆಳಿಗ್ಗೆಯಿಂದ ಮಧ್ನಾಹ್ನದವರೆಗೂ ಪ್ರತಿಭಟನೆ ನಡೆಸಿದರು.
ಸಂಘಟಕರ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ವಸತಿ, ಊಟದ ಅವ್ಯವಸ್ಥೆ ಬಗ್ಗೆ ಕಿಡಿಕಾರಿದ್ದು, 200ರೂ. ನೀಡಿದರೂ ಕಿಟ್ ನೀಡುತ್ತಿಲ್ಲ, ಒಒಡಿ ಪ್ರಮಾಣ ಪತ್ರವನ್ನೂ ನೀಡುತ್ತಿಲ್ಲ. ನಾವು ಇಲ್ಲಿನ ಅವ್ಯವಸ್ಥೆಯಿಂದಾಗಿ ಇರುವಂತೆಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆಗಮಿಸಿದ ವೀರೇಶ್ ಅವರಿಗೆ ದಿಗ್ಭಂಧನ ಹಾಕಲಾಯಿತು, ಅವರನ್ನು ಹಿಗ್ಗಾಮುಗ್ಗಾ ಎಳೆದಾಡಲಾಯಿತು, ಅಷ್ಟರಲ್ಲಿ ಅಪಾಯವನ್ನರಿತ ಅವರು ತಮ್ಮ ವಾಹನದಲ್ಲಿ ಪರಾರಿಯಾದರು. ಬಳಿಕ ಕೇಂದ್ರ ಕಸಾಪ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಅವರು ಪ್ರತಿಭಟನೆ ಎದುರಿಸಬೇಕಾಯಿತು. ಅವಾಚ್ಯ ಶಬ್ದಗಳಿಂದ ನಲ್ಲೂರ್‌ಗೆ ಧಿಕ್ಕಾರ ಕೂಗಲಾಯಿತು. ಪೊಲೀಸರು ಮಧ್ಯಪ್ರವೇಶಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಅಂತೂ ಅವ್ಯವಸ್ಥೆಯ ಆಗರವಾದ 75ನೇ ಕನ್ನಡ ಸಮ್ಮೇಳನದಲ್ಲಿ ಸಂಘಟಕರು ಕಿಟ್ ವಿತರಿಸಲಾಗದೆ 200ರೂಪಾಯಿಗಳನ್ನು ವಾಪಸ್ ನೀಡಿದರು. |