ಮಂಜೇಶ್ವರ ಶಾಸಕ ಸಿ.ಎಚ್. ಕುಂಞಂಬು ಅವರ ಪುತ್ರಿ ಶ್ರುತಿ ಮತ್ತು ಅನ್ಯಕೋಮಿನ ಸ್ನೇಹಿತೆಯ ತಮ್ಮನೊಂದಿಗೆ ಪ್ರಯಾಣಿಸುತ್ತಿದ್ದಾಗ ಬಸ್ಸಿನಿಂದ ಎಳೆದು ಹಾಕಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಶನಿವಾರ ಇಬ್ಬರನ್ನು ಬಂಧಿಸಿರುವುದಾಗಿ ಮಂಗಳೂರು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತಂತೆ ಇಬ್ಬರನ್ನು ಬಂಧಿಸಿರುವುದಾಗಿ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಎ.ಎಂ.ಪ್ರಸಾದ್ ಖಚಿತಪಡಿಸಿದ್ದು, ಪ್ರಕರಣದಲ್ಲಿ ಶಾಮೀಲಾದ ಮತ್ತಷ್ಟು ಜನರನ್ನು ಗುರುತಿಸಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಮತ್ತೆ ನಾಲ್ಕು ಮಂದಿಯ ಗುರುತನ್ನು ಪತ್ತೆ ಹಚ್ಚಿದ್ದು, ಅವರನ್ನು ಶೀಘ್ರವೇ ಬಂಧಿಸಿ ತನಿಖೆ ನಡೆಸಲಾಗುವುದು ಎಂದು ಪ್ರಸಾದ್ ವಿವರಿಸಿದ್ದಾರೆ.
ಶುಕ್ರವಾರ ಸಂಜೆ ಕೇರಳ ಮಂಜೇಶ್ವರದ ಸಿಪಿಎಂ ಶಾಸಕರಾದ ಸಿ.ಎಚ್.ಕುಂಞಂಬು ಅವರ ಪುತ್ರಿ ಶ್ರುತಿ ಮನೆಯಿಂದ ಮಂಗಳೂರಿಗೆ ವಾಪಸಾಗುತ್ತಿದ್ದ ವೇಳೆ, ಆಕೆಯ ಸ್ನೇಹಿತೆಯ ಸೋದರನ ಜತೆಗಿರುವುದನ್ನು ಗಮನಿಸಿದ ಬಸ್ ಕಂಡಕ್ಟರ್ ಈ ಮಾಹಿತಿಯನ್ನು ಬಜರಂಗದಳವರಿಗೆ ಮೊಬೈಲ್ ಮೂಲಕ ತಿಳಿಸಿದ್ದು, ಬಳಿಕ ಪಂಪ್‌ವೆಲ್ ಸಮೀಪ ಬಸ್ ಅನ್ನು ತಡೆದು ಅವರಿಬ್ಬರನ್ನು ಎಳೆದು ಕೆಳಗಿಳಿಸಿ ರಿಕ್ಷಾವೊಂದರಲ್ಲಿ ಪಡೀಲ್‌ನ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ದಿಗ್ಬಂಧನ ಹಾಕಿ ಹಲ್ಲೆ ನಡೆಸಿದ್ದರು. ಶ್ರುತಿಯ ಸ್ನೇಹಿತೆಯ ಸೋದರ ಶಾಹಿಬ್ ಕೂಡ ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ, ಅವರಿಬ್ಬರು ಒಟ್ಟಿಗೆ ಇದ್ದಿರುವುದೇ ಬಜರಂಗದಳದವರು ಶಾಹಿಬ್‌ನನ್ನು ಥಳಿಸಿದ್ದರು ಎಂದು ಆಕೆ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾಳೆ.
ಈ ಹಲ್ಲೆಯನ್ನು ಬಜರಂಗದಳದವರು ನಡೆಸಿದ್ದಾರೋ ಅಥವಾ ಶ್ರೀರಾಮಸೇನೆ ನಡೆಸಿದೆಯೋ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆದರೆ ಪಂಪ್‌ವೆಲ್‌ನಲ್ಲಿ ನಡೆದ ಘಟನೆಯ ಹಿಂದೆ ತಮ್ಮ ಕೈವಾಡ ಇಲ್ಲ ಎಂದು ಶ್ರೀರಾಮಸೇನೆಯ ಸಂಚಾಲಕ ಪ್ರಸಾದ್ ಅತ್ತಾವರ ಸ್ಪಷ್ಟನೆ ನೀಡಿದ್ದಾರೆ. |