ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಿಬ್ಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹರ್ಲಮನೆಯಲ್ಲಿ ಐವರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಮಂಜುನಾಥ್ ಗಣೇಶ್ ಹೆಗಡೆ (65), ಪತ್ನಿ ಶಾರದಾ ಹೆಗಡೆ (55), ಪುತ್ರ ಬಾಲಚಂದ್ರ (14) ಹಾಗೂ ಪುತ್ರಿ ಶ್ರೀಮತಿ (18) ಹಾಗೂ ಕುಟುಂಬಕ್ಕೆ ಪ್ರಸಾದ ನೀಡಲು ಬಂದಿದ್ದ ಗೋಕರ್ಣದ ಆರ್ಚಕ ನಾರಾಯಣ್ ಪುರಾಣಿಕ್ ಕೂಡಾ ಕೊಲೆಯಾಗಿದ್ದಾರೆ.
ಮಲೆನಾಡಿನಲ್ಲಿ ಕಂಡು ಬರುವಂತೆ ಈ ಕುಟುಂಬದವರು ದಟ್ಟ ಕಾಡಿನ ಮಧ್ಯೆ ಇದ್ದ ಒಂಟಿ ಮನೆಯಲ್ಲಿ ವಾಸವಾಗಿದ್ದರು. ಮಂಜುನಾಥ್ ಹೆಗಡೆ ಅಡಿಕೆ ಬೆಳೆಗಾರರಾಗಿದ್ದರು. ಎಂದಿನಂತೆ ಶುಕ್ರವಾರ ಬೆಳಗ್ಗೆ ಕೂಲಿಕಾರರು ಅವರ ಮನೆಗೆ ಬಂದಾಗ ಮುಂದಿನ ಬಾಗಿಲನ್ನು ಮುಚ್ಚಿ, ಒಳಗಿನಿಂದ ಚಿಲಕ ಹಾಕಲಾಗಿತ್ತು. ಅಲ್ಲಿ ಯಾರ ಚಲನವಲನವೂ ಕಂಡುಬಾರದ ಕಾರಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ನಂತರ ಸುತ್ತಮುತ್ತಲ ಪ್ರದೇಶಗಳ ಜನ ಗುಂಪುಗೂಡಿ ಛಾವಣಿ ಹಂಚು ತೆರೆದಾಗ ಇಡೀ ಕುಟುಂಬದ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಬಾಗಿಲು ಮುರಿದು ಒಳಹೊಕ್ಕಾಗ ಕೊಲೆಯಾದ ಎಲ್ಲರ ಕೈ ಕಾಲುಗಳನ್ನು ಹರಿತ ಆಯುಧಗಳಿಂದ ಕತ್ತರಿಸಿ, ಕಬ್ಬಿಣದ ಸಲಾಕೆಯಿಂದ ಎಲ್ಲರ ತಲೆಗಳನ್ನೂ ಜಜ್ಜಿ ಬರ್ಬರವಾಗಿ ಹತ್ಯೆಗೈಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. |