ಉದ್ಯಾನನಗರಿಯನ್ನು ಕಳೆದ ವರ್ಷ ಬೆಚ್ಚಿ ಬೀಳಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ 9ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಡಿಜಿಪಿ ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.2008 ರ ಜುಲೈ 25ರಂದು ಸಿಲಿಕಾನ್ ಸಿಟಿಯ ಎಂಟು ಸ್ಥಳಗಳಲ್ಲಿ 9 ಸ್ಫೋಟ ಸಂಭವಿಸುವ ಮೂಲಕ ರಾಜ್ಯದ ಜನರು ಬೆಚ್ಚಿ ಬೀಳುವಂತಾಗಿತ್ತು. ಈ ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದರು. ಬಂಧಿತ ಉಗ್ರ ಅಬ್ದುಲ್ ಸತ್ತಾರ್ ನೀಡಿದ ಮಾಹಿತಿ ಮೇರೆಗೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಹಾಗೂ ಸಿಸಿಬಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೇರಳ ಮೂಲದ 9ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದು ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಕಮೀಷನರ್ ಶಂಕರ ಬಿದರಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ವಿವರ ನೀಡಿದರು. ಬಂಧಿತರನ್ನು ಅಬ್ದುಲ್ ಸತ್ತಾರ್, ಮುಜೀಬ್, ಅಬ್ದುಲ್ ಜಿಲಾಲ್, ಮುನಾಫ್, ಸರ್ಪುದ್ದೀನ್, ಅಬ್ದುಲ್ ಜಬ್ಬಾರ್, ಬದ್ರುದ್ದೀನ್ ಹಾಗೂ ಶಾದೀಲ್, ಸಕಾರಿಯಾ ಎಂದು ಗುರುತಿಸಲಾಗಿದೆ.ಕೇಂದ್ರ ಸರ್ಕಾರ ಗುಪ್ತಚರ ಇಲಾಖೆ, ರಾಜ್ಯದ ಸಿಓಡಿ, ಸಿಸಿಬಿ, ಗೋಪಾಲ್ ಹೊಸೂರು, ನಿವೃತ್ತ ಡಿಜಿಪಿ ಶ್ರೀಕುಮಾರ್, ಕೇರಳ, ಆಂಧ್ರಪ್ರದೇಶ ಪೊಲೀಸರು ಸೇರಿದಂತೆ ಹಲವು ಇಲಾಖೆಯ ನೆರವಿನೊಂದಿಗೆ ತನಿಖೆಯನ್ನು ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದರು. |