ಮಾಜಿ ಪ್ರಧಾನಿ, ಭಾರತೀಯ ಜನತಾಪಕ್ಷದ ಹಿರಿಯ ನೇತಾರ ಅಟಲ್ ಬಿಹಾರಿ ವಾಜಪೇಯಿ ಅವರು ಸಾವನ್ನಪ್ಪಿದ್ದಾರೆಂದು ಅವಾಂತರ ಮಾಡಿಕೊಂಡು ಕಚೇರಿಯಲ್ಲಿ ಸಂತಾಪ ಸೂಚಕ ಸಭೆ ನಡೆಸಿದ ಮೈಸೂರು ಜಿಲ್ಲಾಧಿಕಾರಿ ಮುಜುಗರಕ್ಕೀಡಾದ ಪ್ರಸಂಗವೊಂದು ಶನಿವಾರ ನಡೆದಿತ್ತು.
ಇಲ್ಲಿನ ಕಬ್ಬು ಬೆಳೆಗಾರರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದಾಗ, ಇವತ್ತು ಯಾವುದೇ ಚರ್ಚೆ, ಕೆಲಸ ಮಾಡುವುದಿಲ್ಲ, ಮಾಜಿ ಪ್ರಧಾನಿ ವಾಜಪೇಯಿ ಅವರು ವಿಧಿವಶರಾಗಿದ್ದರಿಂದ ಅದು ಶಿಷ್ಟಾಚಾರದ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಮಣಿವಣ್ಣನ್ ತಿಳಿಸಿದಾಗ, ಆಗಮಿಸಿದ ರೈತರು ಅಲ್ಲಿಯೇ ಸಂತಾಪ ಸೂಚಕ ಸಭೆ ನಡೆಸಿದ್ದರು.
ಇದು ಮೈಸೂರು ಜಿಲ್ಲಾಧಿಕಾರಿ ಮಣಿವಣ್ಣನ್ ಅವರ ಅವಾಂತರ. ಆದರೆ ಮಣಿವಣ್ಣನ್ ಅವರು ಕಬ್ಬು ಬೆಳೆಗಾರರು ಕಚೇರಿಯೊಳಗೆ ಆಗಮಿಸಿದಾಗ ನಾನು ದೆಹಲಿಯಿಂದ ಬಂದ ಮೊಬೈಲ್ ಕರೆಯನ್ನು ಸ್ವೀಕರಿಸಿ ಮಾತನಾಡುತ್ತಿದ್ದುದ್ದನ್ನೇ ತಪ್ಪಾಗಿ ಅರ್ಥೈಸಿ ಸಂತಾಪ ಸೂಚಕ ಸಭೆ ನಡೆಸಿದ್ದಾರೆಂದು ಸಮಜಾಯಿಷಿಕೆ ನೀಡಿದ್ದಾರೆ.
ಘಟನೆ ಕುರಿತು ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಅಟಲ್‌ಜೀ ಅವರು ಇಂದು ವಿಧಿವಶರಾಗಿದ್ದು, ಏನೇ ಕಾರ್ಯ ಮಾಡಿದರು ಶಿಷ್ಟಾಚಾರದ ಉಲ್ಲಂಘನೆಯಾಗುತ್ತದೆ ಎಂದು ಸ್ವತಃ ಜಿಲ್ಲಾಧಿಕಾರಿ ಮಣಿವಣ್ಣನ್ ಅವರೇ ತಿಳಿಸಿದ್ದಕ್ಕೆ ತಾವು ಸಂತಾಪ ಸೂಚಕ ಸಭೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಅಂತೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ವಾಜಪೇಯಿ ಅವರು ಸಾವನ್ನಪ್ಪಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೆ ಜಿಲ್ಲಾಧಿಕಾರಿಯೊಬ್ಬರು ಈ ಪರಿ ಅವಾಂತರ ಮಾಡಿಕೊಂಡಿರುವುದು ಅಚ್ಚರಿ ವಿಷಯವಾಗಿದೆ. |