ಅವ್ಯವಸ್ಥೆ, ಪ್ರತಿಭಟನೆ, ಸಮ್ಮೇಳನಾಧ್ಯಕ್ಷರ ಕಿಡಿನುಡಿಯೊಂದಿಗೆ ಇಲ್ಲಿ ನಡೆಯುತ್ತಿರುವ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ತೆರೆ ಬಿತ್ತು.
ಜಾತಿ ವ್ಯವಸ್ಥೆಯೇ ಮತಾಂತರಕ್ಕೆ ಕಾರಣ, ತುಳಿತಕ್ಕೊಳಗಾದ ದಲಿತ ಸಮುದಾಯ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಮ್ಮೇಳನಾಧ್ಯಕ್ಷ ಪ್ರೊ.ಎಲ್.ಬಸವರಾಜು ಮತ್ತೊಮ್ಮೆ ಕಿಡಿಕಾರಿದ್ದಾರೆ. ಸಾಹಿತ್ಯ ಸಮ್ಮೇಳನದ ಅಂತಿಮ ದಿನವಾದ ಇಂದು ಸಮ್ಮೇಳನಾಧ್ಯಕ್ಷರ ಜೊತೆಯಲ್ಲಿನ ಸಂವಾದದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತಾಂತರ ತಡೆಯುವರು ಅಧರ್ಮಿಷ್ಠರು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅವರೆಲ್ಲ ಗುಲಾಮಗಿರಿಯ ಪೋಷಕರು. ಮತಾಂತರ ತಡೆಯುತ್ತೇವೆ ಎಂದು ಹೊರಟವರು ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಹೊರಟಿದ್ದಾರೆ ಎಂದು ಆಪಾದಿಸಿದರು.
ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡಿದ ಸಂದರ್ಭದಲ್ಲಿಯೇ ಬಸವರಾಜು ಅವರು, ಬ್ರಾಹ್ಮಣಶಾಹಿ, ಮಠಾಧಿಪತಿಗಳ ವಿರುದ್ಧ ಕಿಡಿಕಾರಿರುವುದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಬಳಿಕ ಅವರ ಯಾವುದೇ ಗೋಷ್ಠಿಯಲ್ಲಿ ಭಾಗವಹಿಸಿರಲಿಲ್ಲವಾಗಿತ್ತು. ಅಂತಿಮ ದಿನದ ಸಂವಾದದಲ್ಲಿ ಭಾಗವಹಿಸಿದ ಅವರು ಮತ್ತೊಮ್ಮೆ ತಮ್ಮ ಕಿಡಿನುಡಿಯೊಂದಿಗೆ ಸಾಹಿತ್ಯಭಿಮಾನಿಗಳಲ್ಲಿ ಸಂಚಲನ ಮೂಡಿಸಿದರು.
ಹಿರಿಯ ಸಾಹಿತಿಗಳ ಭಾಷಣ ಆಲಿಸಬಹುದಿತ್ತು ಎಂಬ ಸಾಹಿತ್ಯಾಸಕ್ತರ ಆಸೆಗೆ ತಣ್ಣೀರು ಎರಚಿದಂತಾಗಿತ್ತು. ಆದರೂ ಇಂತಹ ಅವ್ಯವಸ್ಥೆಯ ನಡುವೆಯೂ ಬಯಲುಸೀಮೆಯ ಜನ ಬಿಸಿಲನ್ನು ಲೆಕ್ಕಿಸದೇ ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಅಕ್ಷರ ಜಾತ್ರೆಯಲ್ಲಿ ಭಾಗವಹಿಸಿದ್ದರು.
ಪುಸ್ತಕ ಮಳಿಗೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಪುಸ್ತಕ ಪ್ರೇಮಿಗಳ ಉತ್ಸಾಹ ಎಲ್ಲೆ ಮೀರಿತ್ತು. ಒಂದು ಅಂದಾಜಿನ ಪ್ರಕಾರ ಕಳೆದ ನಾಲ್ಕು ದಿನಗಳಲ್ಲಿ ಸಮಾರು 2ಕೋಟಿ ರೂ.ಗೂ ಹೆಚ್ಚು ಪುಸ್ತಕಗಳು ಮಾರಾಟವಾಗಿದೆ ಎಂದು ಪುಸ್ತಕ ಪ್ರಕಾಶಕರು ತಿಳಿಸಿದ್ದಾರೆ. |