ಮಂಜೇಶ್ವರ ಶಾಸಕ ಪುತ್ರಿ ಶ್ರುತಿ ಮತ್ತು ಆಕೆಯ ಸ್ನೇಹಿತೆ ತಮ್ಮ ಶಾಹಿಬ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಜೇಶ್ವರ ಶಾಸಕ ಸಿ.ಎಚ್.ಕುಂಞಂಬು ಅವರ ಪುತ್ರಿ ಮತ್ತು ಆಕೆಯ ಅನ್ಯಕೋಮಿನ ಸ್ನೇಹಿತೆಯ ಸಹೋದರನಿಗೆ ಶುಕ್ರವಾರ ಹಲ್ಲೆ ನಡೆಸಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶನಿವಾರ ಸಂಜೆ ಹೊತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಆಸುಪಾಸಿನವರಾದ ಬಸ್ ಟೈಮ್ ಕೀಪರ್ ರಾಜು ಆಲಿಯಾಸ್ ರಾಜೇಶ್, ಮೆಕ್ಯಾನಿಕ್ ರಂಜಿತ್, ವೈಶಾಖ್ ಬಸ್ ಚಾಲಕ ಅರವಿಂದ ದಾಸ್, ಮತ್ತೊಬ್ಬ ಚಾಲಕ ಸತೀಶ್ ಹಾಗೂ ಮಂಗಳೂರು ಆಸುಪಾಸಿನ ಪ್ರಕಾಶ್ (ಈತ ರಾಜೇಶ್‌ನ ಗೆಳೆಯ ಮತ್ತು ಪ್ರಕರಣದ ರೂವಾರಿ) ಎಂಬವರನ್ನು ಬಂಧಿಸಿದ್ದಾರೆ. ಇವರಲ್ಲಿ ರಾಜೇಶ್ ಮತ್ತು ರಂಜಿತ್ ಎಂಬವರು ಶ್ರುತಿ ಮತ್ತು ಶಾಹಿಬ್‌ರನ್ನು ಬಸ್‌ನಿಂದ ಕೆಳಗಿಳಿಸಿ ರಿಕ್ಷಾದಲ್ಲಿ ಕರೆದುಕೊಂಡು ಹೋದವರು. ಅದನ್ನು ಹಿಂಬಾಲಿಸಿದ ಬೈಕ್ ಮತ್ತು ರಿಕ್ಷಾಗಳಿನ್ನೂ ಪತ್ತೆಯಾಗಿಲ್ಲ. ಶ್ರುತಿ ಮತ್ತು ಶಾಹಿಬ್ ಬಸ್‌ನಲ್ಲಿ ಬರುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದು ಬಸ್ ಚಾಲಕ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳಲ್ಲಿ ಕೆಲವರನ್ನು ಬಂಧಿಸಲಾಗಿದ್ದರೂ ಇದರ ಹಿಂದಿನ ಪ್ರಮುಖ ರೂವಾರಿಗಳ್ಯಾರೆಂದು ತಿಳಿದು ಬಂದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ. ಆದರೆ ಇವರು ಯಾವುದೇ ಸಂಘಟನೆಗೆ ಸೇರಿದವರಂತಿಲ್ಲ. ಇನ್ನಿಬ್ಬರು ಆರೋಪಿಗಳನ್ನು ಭಾನುವಾರದ ಹೊತ್ತಿಗೆ ಬಂಧಿಸುವ ಭರವಸೆಯನ್ನೂ ಅವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ.
ಭಜರಂಗದಳ ಮತ್ತು ಶ್ರೀರಾಮ ಸೇನೆಯ ವರಿಷ್ಠರು ಮಂಗಳೂರು ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಸ್ಪಷ್ಟನೆ ನೀಡಿದ್ದು, ತಮ್ಮ ಕೈವಾಡವಿಲ್ಲ ಎಂದಿದ್ದರು.
|