ಬೆಂಗಳೂರು-ಕೊಲ್ಹಾಪುರ ಎಕ್ಸ್‌ಪ್ರೆಸ್ ರೈಲಿನ ಎಂಟು ಬೋಗಿಗಳು ಹಾವೇರಿ ಸಮೀಪದ ದೇವರಗುಡ್ಡ-ಬ್ಯಾಡಗಿ ನಡುವೆ ಹಳಿ ತಪ್ಪಿದ ಘಟನೆ ಸೋಮವಾರ ಮುಂಜಾನೆ ವರದಿಯಾಗಿದೆ. 'ಕಿತ್ತೂರು ರಾಣಿ ಚೆನ್ನಮ್ಮ' ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ್ದು ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ.
ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ರೈಲಿನ ಎಂಟು ಬೋಗಿಗಳು ಹಳಿ ತಪ್ಪಿದ್ದು ಯಾವುದೇ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ. ರೈಲಿನಲ್ಲಿದ್ದ ಪ್ರಯಾಣಿಕರನ್ನು ಬಸ್ ಮೂಲಕ ಹುಬ್ಬಳ್ಳಿ ತಲುಪಿಸಲಾಗಿದೆ ಎಂದು ರೈಲ್ವೇ ಇಲಾಖೆ ಮೂಲಗಳು ತಿಳಿಸಿವೆ.
ಒಂದು ಎರಡನೇ ದರ್ಜೆ ಸರಕು ಸಾಗಣೆ, ಎರಡು ಸಾಮಾನ್ಯ ದರ್ಜೆ, ಒಂದು ಪ್ರಥಮ ದರ್ಜೆ ಎಸಿ, ಎರಡು ದ್ವಿತೀಯ ದರ್ಜೆ ಎಸಿ ಹಾಗೂ ಎರಡು ತ್ರೀಟೈರ್ ಎಸಿ ಕೋಚ್‌ಗಳು ಸೇರಿದಂತೆ ಒಟ್ಟು 8 ಬೋಗಿಗಳು ಹಳಿ ತಪ್ಪಿವೆ. ಘಟನೆ ಹಿನ್ನಲೆಯಲ್ಲಿ ಅದೇ ಮಾರ್ಗವಾಗಿ ಸಾಗಲಿದ್ದ ಬೆಂಗಳೂರು-ಗಾಂಧಿಗ್ರಾಮ್ ಎಕ್ಸ್‌ಪ್ರೆಸ್ ರೈಲನ್ನು ಪರ್ಯಾಯ ಮಾರ್ಗದಲ್ಲಿ ಕಳುಹಿಸಲಾಗಿದೆ ಮತ್ತು ಕೆಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಬೆಂಗಳೂರು ಸಿಟಿ ಜಂಕ್ಷನ್‌ನಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು 22259271, 22354108 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ರೈಲ್ವೇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
|