ಮಾಜಿ ಮುಖ್ಯಮಂತ್ರಿ ಎಚ್.ಡಿ.ಕೆ.ಕುಮಾರಸ್ವಾಮಿ ಅವರು ಕಳೆದ ಸೋಮವಾರ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ನವದೆಹಲಿಯಲ್ಲಿ ಗುಪ್ತವಾಗಿ ಭೇಟಿ ಮಾಡಿರುವ ವಿಷಯ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕೋಲಾಹಲ ಸೃಷ್ಟಿಸಿದೆ.
ಸೋನಿಯಾ ಮತ್ತು ಕುಮಾರಸ್ವಾಮಿ ಅವರ ಭೇಟಿಯ ಸಂದರ್ಭದಲ್ಲಿ ಏನು ಮಾತುಕತೆ ನಡೆದಿದೆ ಎನ್ನುವುದು ಗೊತ್ತಾಗಿಲ್ಲ. ಆದರೆ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಹೊಂದಾಣಿಕೆ ಬಗ್ಗೆ ಚರ್ಚೆ ನಡೆದಿರುವ ಸಾಧ್ಯತೆ ಇರುವುದಾಗಿ ಕೆಲವು ಮೂಲಗಳು ತಿಳಿಸಿವೆ.
ಆದರೆ ಅವರಿಬ್ಬರ ಭೇಟಿಯ ಕುರಿತು ರಾಜ್ಯದ ಕಾಂಗ್ರೆಸ್ ನಾಯಕರೇ ವಿಭಿನ್ನ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಸೋನಿಯಾ-ಕುಮಾರಸ್ವಾಮಿ ಭೇಟಿಯ ಸುದ್ದಿ ಮಾಧ್ಯಮಗಳ ಸೃಷ್ಟಿ ಎಂದು ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.
ಮಾತುಕತೆ ನಡೆದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರೆ, ಎಐಸಿಸಿ ಮಟ್ಟದಲ್ಲಿ ಮಾತುಕತೆ ನಡೆದಿರುಬಹುದು ಎಂದು ಕೆಪಿಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |