ಸಂಸ್ಕೃತಿ, ಧರ್ಮದ ಹೆಸರಲ್ಲಿ ಯಾವುದೇ ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಂಡು ಶಾಂತಿ ಸುವ್ಯವಸ್ಥೆ ಹದಗೆಡಿಸುವಂತಹ ಕೃತ್ಯಕ್ಕೆ ಕೈ ಹಾಕಿದರೆ ಗೂಂಡಾ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗೃಹ ಸಚಿವ ವಿ.ಎಸ್.ಆಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಈಗಾಗಲೇ ಮಂಗಳೂರು ಪಬ್ ದಾಳಿ, ಶಾಸಕರ ಪುತ್ರಿ ಮೇಲಿನ ಹಲ್ಲೆ ಘಟನೆಗಳ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದ ಅವರು, ಆರೋಪಿಗಳು ಶ್ರೀರಾಮಸೇನೆಯವರೇ ಇರಲಿ, ಎಡಪಕ್ಷದವರೇ ಇರಲಿ ಅದು ನಮಗೆ ಮುಖ್ಯವಲ್ಲ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಂಜೇಶ್ವರ ಶಾಸಕ ಕುಂಞಂಬು ಅವರ ಪುತ್ರಿ ಮೇಲಿನ ಹಲ್ಲೆ ಕುರಿತು ಸರ್ಕಾರಕ್ಕೆ ಕೇಂದ್ರ ಮಹಿಳಾ ಆಯೋಗ ಯಾವುದೇ ವರದಿ ಕೇಳಿಲ್ಲ. ಅಂತಹದ್ದೇನಾದರೂ ಇದ್ದರೆ ಅವರೇ ತಂಡ ಕಳುಹಿಸಬಹುದು ಎಂದರು.
ಪ್ರೇಮಿಗಳ ದಿನಾಚರಣೆಯಂದು ಯಾರೂ ದಬ್ಬಾಳಿಕೆ ನಡೆಸುವಂತಿಲ್ಲ, ಆ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಆಚಾರ್ಯ ಈ ಸಂದರ್ಭದಲ್ಲಿ ಭರವಸೆ ನೀಡಿದರು. |