'ತನ್ನನ್ನು ಅಧಿಕಾರದಿಂದ ಕೆಳಗಿಳಿಸುವ ವ್ಯವಸ್ಥಿತ ಸಂಚು' ನಡೆಯುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತಂಕ ತೋಡಿಕೊಂಡಿದ್ದಾರೆ.
ಭಾನುವಾರ ಅರಮನೆ ಮೈದಾನದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.
ಆದರೆ ತನ್ನನ್ನು ಕುರ್ಚಿಯಿಂದ ಯಾರು ಕೆಳಗಿಳಿಸುವಲ್ಲಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂಬ ಗುಟ್ಟನ್ನು ಮಾತ್ರ ಅವರು ಬಿಟ್ಟು ಕೊಡದೆ ಮಾತನಾಡಿದ ಅವರು, ಕುರ್ಚಿಯಿಂದ ಕೆಳಗಿಳಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದು, ನನಗೆ ಅಧಿಕಾರ ಮುಖ್ಯ ಅಲ್ಲ. ಜನರ ಆಶೀರ್ವಾದದಿಂದ ಅಧಿಕಾರದ ಗದ್ದುಗೆ ಏರಿದ್ದೇನೆ. ಏನೇ ಆದರು ಜನರ ಸೇವೆ ಮುಂದುವರಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಂದಲ್ಲ ಒಂದು ಪ್ರಕರಣ ಎತ್ತಿಕೊಂಡು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರೆ, ಮತ್ತೊಂದೆಡೆ ಪಕ್ಷದೊಳಗಿನಿಂದಲೇ ಯಡಿಯೂರಪ್ಪ ಅವರನ್ನು ಹಣಿಯುವ ತಂತ್ರಗಾರಿಕೆ ಮಾಡಲಾಗುತ್ತಿದೆ ಎಂಬ ಊಹಾಪೋಹಗಳು ರಾಜ್ಯರಾಜಕಾರಣದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. |