ಕೇರಳ ಸಿಪಿಎಂ ಶಾಸಕ ಕುಂಞಂಬು ಅವರ ಪುತ್ರಿ ಶ್ರುತಿ ಅಪಹರಣಕ್ಕೆ ಸಂಬಂಧಿಸಿ, ಬಂಧಿತ ಐವರಲ್ಲಿ ಇಬ್ಬರು ಸಿಪಿಎಂನವರು ಹಾಗೂ ಉಳಿದವರು ಕಾಂಗ್ರೆಸಿಗರು ಎಂಬುದು ತನಿಖೆಯಿಂದ ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದು, ರಾಜ್ಯ ಸರಕಾರದ ವಿರುದ್ಧ ಮನಬಂದಂತೆ 'ಆಧಾರ ರಹಿತ' ಹೇಳಿಕೆಗಳನ್ನು ನೀಡುತ್ತಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಣುಕಾ ಚೌಧುರಿಯನ್ನು ಹದ್ದುಬಸ್ತಿನಲ್ಲಿರಿಸಿಕೊಳ್ಳುವಂತೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ.
ಆಕೆಗೆ ಸೂಕ್ತ ಸಲಹೆ ನೀಡುವಂತೆ ತಾನು ಪ್ರಧಾನಿಯನ್ನು ಕೋರುವುದಾಗಿ ತಿಳಿಸಿದ ಅವರು, ಶ್ರುತಿ ಅಪಹರಣಕ್ಕೆ ಸಂಬಂಧಿಸಿ ಬಂಧಿತ ಐವರಲ್ಲಿ ಇಬ್ಬರು ಸಿಪಿಎಂನವರು. ಉಳಿದವರು ಕಾಂಗ್ರೆಸ್ ಕಾರ್ಯಕರ್ತರು ಎಂಬುದು ತನಿಖೆಯಿಂದ ಶ್ರುತಪಟ್ಟಿದೆ ಎಂದು ಹೇಳಿದರಲ್ಲದೆ, ಬಂಧಿತರ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.
'ಯಾವುದೇ ಸತ್ಯಾಂಶವನ್ನು ಪರಿಶೀಲಿಸದೆಯೇ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವೆ ನಮ್ಮ ಸರಕಾರದ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕೇರಳ ಶಾಸಕ ಸಿ.ಎಚ್.ಕುಂಞಂಬು ಅವರ ಪುತ್ರಿ ಶ್ರುತಿ ಅಪಹರಣ ಪ್ರಕರಣವನ್ನು ಖಂಡಿಸಿದ ಅವರು, ಬಿಜೆಪಿ ಆಡಳಿತದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಹೇಳಿಕೆ ನೀಡಿದ ರೇಣುಕಾ ವಿರುದ್ಧ ಹರಿಹಾಯ್ದರು. |