ಮಂಜೇಶ್ವರ ಶಾಸಕ ಕುಂಞಂಬು ಪುತ್ರಿ ಶ್ರುತಿ ಅಪಹರಣ ಪ್ರಕರಣ ಇದೀಗ ರಾಜಕೀಯ ತಿರುವು ಪಡೆಯುತ್ತಿದ್ದು, ಇದರಲ್ಲಿ ತಮ್ಮ ಪಕ್ಷದ ಕಾರ್ಯಕರ್ತರ ಕೈವಾಡವಿಲ್ಲ ಎಂದು ಸಿಪಿಎಂ ಸ್ಪಷ್ಟಪಡಿಸಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ವಿಜೆಕೆ ನಾಯರ್, ಈ ಪ್ರಕರಣದಲ್ಲಿ ಪೊಲೀಸರು ಸಂಘ ಪರಿವಾರವನ್ನು ಬೆಂಬಲಿಸುವ ಮೂಲಕ ಸಿಪಿಎಂ ಕಾರ್ಯಕರ್ತರ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ದೂರಿದರು.
ಶಾಸಕರ ಮಗಳು ಮುಸ್ಲಿಂ ಯುವಕನ ಜತೆ ಮಾತನಾಡಿದ ಕಾರಣಕ್ಕೆ ಆ ಹುಡುಗಿಯನ್ನು ಸಂಘ ಪರಿವಾರದ ಕಾರ್ಯಕರ್ತರು ಮಂಗಳೂರಿನಲ್ಲಿ ಅಪಹರಿಸಿ, ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತರು ಸಿಪಿಎಂ, ಡಿವೈಎಫ್ಐ ಕಾರ್ಯಕರ್ತರೆಂದು ಸುಳ್ಳು ಹೇಳಲಾಗುತ್ತಿದೆ. ಬಂಧಿತ ನಾಲ್ವರು ಸಂಘ ಪರಿವಾರದವರು ಎನ್ನಲು ಸಾಕಷ್ಟು ಪುರಾವೆಗಳಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಮಂಗಳೂರಿನಲ್ಲಿ ಕೋಮು ಸಂಘರ್ಷ ಸೃಷ್ಟಿಸಲು ಬಿಜೆಪಿ ಸರಕಾರ, ಸಂಘ ಪರಿವಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದೆ. ಇನ್ನೊಂದೆಡೆ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕುವುದಾಗಿ ಗೃಹ ಸಚಿವರು ಹೇಳುತ್ತಿರುವುದನ್ನು ಖಂಡಿಸುವುದಾಗಿ ಅವರು ಹೇಳಿದರು. |