ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಹೇರುವ ಪ್ರಶ್ನೆಯೇ ಇಲ್ಲ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರತಿದಿನ ವಿದ್ಯುತ್ ಬೇಡಿಕೆಯನ್ನು ಸರಿದೂಗಿಸಲು ಲಭ್ಯವಿರುವ ಎಲ್ಲಾ ಮೂಲಗಳಿಂದ ವಿದ್ಯುತನ್ನು ಪಡೆಯಲಾಗುತ್ತಿದೆ. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಆಗಲಿ, ವಿದ್ಯುತ್ ದರ ಏರಿಕೆಯಾಗಲಿ ಇಲ್ಲವೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಸ್ತುತ ದಿನಕ್ಕೆ 125ಮಿಲಿಯನ್ ಯೂನಿಟ್ ವಿದ್ಯುತ್ ಬೇಡಿಕೆ ಇದ್ದು, ಈ ಬೇಡಿಕೆಗೆ ಅನುಗುಣವಾಗಿ ಲಭ್ಯವಿರುವ ಎಲ್ಲಾ ಮೂಲಗಳಿಂದ ವಿದ್ಯುತ್‌ನ್ನು ಖರೀದಿಸಲಾಗುತ್ತಿದೆ. ಹಾಗಾಗಿ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿ ಮಾಡುವ ಪರಿಸ್ಥಿತಿ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಛತ್ತೀಸ್‌ಗಢದಿಂದ 200ಮೆಗಾವ್ಯಾಟ್ ವಿದ್ಯುತ್, ಸಕ್ಕರೆ ಕಾರ್ಖಾನೆಗಳಿಂದ 300ಮೆಗಾವ್ಯಾಟ್ ವಿದ್ಯುತ್ ಸೇರಿದಂತೆ ಅಸಂಪ್ರದಾಯಿಕ ಇಂಧನ ಮೂಲಗಳಿಂದ ಸೇರಿ ಎಲ್ಲಾ ಕಡೆಗಳಿಂದಲೂ ವಿದ್ಯುತ್‌ನ್ನು ರಾಜ್ಯ ಪಡೆಯುತ್ತಿದ್ದು, ಇದಕ್ಕಾಗಿ ಅಗತ್ಯವಿರುವ ಹಣ ಸಹ ಒದಗಿಸಲಾಗಿದೆ ಎಂದರು. |