ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಸೆರೆಸಿಕ್ಕ ಜೋಡಿಗಳಿಗೆ ಮದುವೆ ಮಾಡಿಸುವುದಾಗಿ ಹೇಳಿರುವ ಶ್ರೀರಾಮಸೇನೆಗೆ ಪಿಂಕ್ ಚೆಡ್ಡಿ ನೀಡಲು ನಿರ್ಧರಿಸಿರುವ ಪ್ರತಿಭಟನಾಕಾರರಿಗೆ ಸವಾಲು ಎಂಬಂತೆ, ಚಡ್ಡಿ ಕೊಟ್ಟೋರಿಗೆ ಪಿಂಕ್ ಸೀರೆ ಉಡುಗೊರೆ ಕೊಡುವುದಾಗಿ ಮುತಾಲಿಕ್ ತಿರುಗೇಟು ನೀಡಿದ್ದಾರೆ.ಪ್ರೇಮಿಗಳ ದಿನಾಚರಣೆ, ಪಬ್ ಸಂಸ್ಕೃತಿಯ ವಿರುದ್ಧ ಹರಿಹಾಯ್ದಿರುವ ಶ್ರೀರಾಮಸೇನೆಯ ಮುಖ್ಯಸ್ಥ ಅವರಿಗೆ ಪಿಂಕ್ ಚೆಡ್ಡಿ ಕೊಡುಗೆಯಾಗಿ ನೀಡಲು ಪ್ರತಿಭಟನಾಕಾರರು ನಿರ್ಧರಿಸಿದ್ದು, ಅದಕ್ಕಾಗಿ ಮೂರು ಸಾವಿರ ಒಳಉಡುಪು ಸಂಗ್ರಹಿಸುವ ಭರವಸೆ ವ್ಯಕ್ತಪಡಿಸಿದ್ದರು. ಆದರೆ ಈ ಬಗೆಯ ಚಳವಳಿ ನಡೆಸುವವರ ಕೌಟುಂಬಿಕ ಹಿನ್ನೆಲೆಯನ್ನೇ ಶ್ರೀರಾಮಸೇನೆ ಪ್ರಶ್ನಿಸಿದೆ.ಸಾಮಾಜಿಕ ಸಂಪರ್ಕ ಅಂತರ್ಜಾಲ ಫೇಸ್ ಬುಕ್‌ನ ಮೂಲಕ ಶ್ರೀರಾಮಸೇನೆ ವಿರುದ್ಧ ಚಳವಳಿ ಹಮ್ಮಿಕೊಂಡಿದ್ದು, ಮುತಾಲಿಕ್ ಅವರಿಗೆ ಪಿಂಕ್ ಚೆಡ್ಡಿ ಕೊಡುಗೆ ನೀಡಲು ಕರೆ ನೀಡಿತ್ತು.ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಂಕ್ ಚೆಡ್ಡಿ ಕಳುಹಿಸಿ, ಹಾಗೆಯೇ ನಾವು ನಿಮಗೆ ಪಿಂಕ್ ಸೀರೆ ಕೊಡುಗೆ ನೀಡಲು ರಾಷ್ಟ್ರೀಯ ಹಿಂದೂ ಸೇನಾ(ಆರ್‌ಎಚ್‌ಎಸ್)ದ ಮಹಿಳಾ ಘಟಕ ಈಗಾಗಲೇ 150 ಸೀರೆಗಳನ್ನು ಸಂಗ್ರಹಿಸಿದೆ. ಇದನ್ನು ನಾವು ಉಡುಗೊರೆಯಾಗಿ ನೀಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.ಪ್ರೇಮಿಗಳ ದಿನಾಚರಣೆಯಂದು ನಾವು ಪ್ರೇಮಿಗಳ ಜೋಡಿಯನ್ನು ಬಲವಂತವಾಗಿ ಏನೂ ಮಾಡುವುದಿಲ್ಲ, ಆದರೆ ಅಂತಹ ಜೋಡಿಗಳನ್ನು ವಶಕ್ಕೆ ತೆಗೆದುಕೊಂಡು ಅವರನ್ನು ಪೋಷಕರಿಗೆ ಅಥವಾ ಪೊಲೀಸರಿಗೆ ಒಪ್ಪಿಸುತ್ತೇವೆ ಎಂದ ಮುತಾಲಿಕ್, ಪೋಷಕರ ಸಮ್ಮತಿ ಮೇರೆಗೆ ಮದುವೆ ಮಾಡಿಸುವುದಾಗಿಯೂ ಹೇಳುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.ಪಬ್ ಸಂಸ್ಕೃತಿ ಮತ್ತು ಅಶ್ಲೀಲತೆಯ ವಿರುದ್ಧ ಹೋರಾಡುವ ಮೂಲಕ ನಾವು ತಾಯಿ ಗೌರವ ಹೆಚ್ಚಿಸಿದ್ದು, ಈಗ ಚಳವಳಿ ಮಾಡುತ್ತಿರುವವರು ತಮ್ಮ ದಿವಾಳಿತನ ಮತ್ತು ಅನುಚಿತ ನಡವಳಿಕೆ ಪ್ರದರ್ಶಿಸಲು ಹೊರಟಿದ್ದಾರೆ ಎಂದು ಅವರು ಟೀಕಿಸಿದರು. |