ಸಂಘ ಪರಿವಾರದಿಂದ ಪರ್ಯಾಯ ಸರ್ಕಾರ ನಡೆಸುತ್ತಿರುವುದನ್ನು ತಡೆಯಲು ವಿಫಲವಾಗಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಳೆಯಿಂದ (ಫೆ.12) ರಾಜಭವನ ಚಲೋ ಪ್ರತಿಭಟನಾ ರಾಲಿ ಹಮ್ಮಿಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕೆಪಿಸಿಸಿ ಕಚೇರಿಯಿಂದ ಕಬ್ಬನ್ ಪಾರ್ಕ್‌ವರೆಗೆರಾಲಿ ನಡೆಸಿ ನಂತರ 200 ಮುಖಂಡರು ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಬೆಂಬಲಿತ ಸಂಘ ಪರಿವಾರದ ಸಂಘಟನೆಗಳು ರಾಜ್ಯದ ಶಾಂತಿ ಸೌಹಾರ್ದತೆಗೆ ಭಂಗ ಉಂಟು ಮಾಡುತ್ತಿವೆ. ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಹೀಗೆ ಮುಂದುವರಿದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಪಾಲರಿಗೆ ಒತ್ತಾಯ ಮಾಡಬೇಕಾದಿತು ಎಂದು ಎಚ್ಚರಿಕೆ ನೀಡಿದರು.
ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸಿ ಮದುವೆ ಮಾಡಿಸುವುದಾಗಿ ಶ್ರೀರಾಮ ಸೇನೆ ಹೇಳಿದೆ. ಇಂಥವರನ್ನೆಲ್ಲಾ ಗೂಂಡಾ ಕಾಯ್ದೆಯಡಿ ಬಂಧಿಸುವ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. |