ಮಂಗಳೂರಿನ ಕರಾವಳಿ ಅಲೆ ಪತ್ರಿಕೆಯ ಸಂಪಾದಕ ಬಿ.ವಿ.ಸೀತಾರಾಮ್ ಬಂಧನದ ವಿಷಯದಲ್ಲಿ ಪೊಲೀಸರ ನಡೆದುಕೊಂಡ ರೀತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಹೈಕೋರ್ಟ್, ಈ ಸಂಬಂಧ ರಾಜ್ಯ ಸರ್ಕಾರಕ್ಕೆ 10ಸಾವಿರ ರೂ.ಗಳ ದಂಡ ವಿಧಿಸುವ ಮೂಲಕ ಆಡಳಿತಾರೂಢ ಸರ್ಕಾರ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ.
ಸೀತಾರಾಮ್ ಅವರನ್ನು ಬಂಧಿಸಿರುವುದು ಕಾನೂನುಬದ್ದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ವಿಭಾಗೀಯ ಪೀಠ, ಸೀತಾರಾಮ್ ಬಂಧನದಿಂದ ಹಿಡಿದು ಇತ್ತೀಚಿನ ಹೈಕೋರ್ಟ್‌ನ ಆದೇಶದ ಮೂಲಕ ಬಿಡುಗಡೆ ಮಾಡುವವರೆಗೆ ಪೊಲೀಸರು ವಿವಿಧ ಹಂತದಲ್ಲಿ ಅಕ್ರಮ ಎಸಗಿರುವುದು ಸಾಬೀತಾಗುತ್ತದೆ ಎಂದು ಹೇಳಿದೆ.
ಬಂಧನದ ನಂತರವೂ ಕಾಲ,ಕಾಲಕ್ಕೆ ಸೀತಾರಾಮ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ಅಕ್ರಮವೆಸಗಿದ್ದಾರೆ. ಜನವರಿ 19ರಿಂದ ಫೆ.3ರವರೆಗೆ ಸೀತಾರಾಮ್ ಅವರನ್ನು ಅಕ್ರಮ ಬಂಧನದಲ್ಲಿರಿಸಲಾಗಿದೆ ಎಂದು ನ್ಯಾಯಮೂರ್ತಿ ಎಸ್.ಆರ್.ಬನ್ನೂರ್‌ಮಠ್ ಹಾಗೂ ಎ.ಎನ್.ವೇಣುಗೋಪಾಲಗೌಡ ಅವರನ್ನೊಳಗೊಂಡ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಸೀತಾರಾಮ್ ಅವರಿಗೆ ಹಿಂಸೆ ನೀಡಿದ್ದಕ್ಕೆ ನಾಲ್ಕು ವಾರದೊಳಗೆ 10ಸಾವಿರ ರೂ.ಗಳನ್ನು ಸೀತಾರಾಮ್ ಅವರಿಗೆ ದಂಡದ ರೂಪದಲ್ಲಿ ನೀಡುವಂತೆ ಗೃಹ ಇಲಾಖೆಗೆ ಪೀಠ ಸೂಚಿಸಿದೆ. |