'ಕೆಟ್ಟ ಮೇಲೆ ಬುದ್ದಿ ಬಂತು' ಎಂಬಂತೆ ಅತಿರಂಜಿತ ವರದಿ ಮಾಡುತ್ತಿರುವ ಮಾಧ್ಯಮಗಳ ಮೇಲೆ ಅಂಕುಶ ಹಾಕುವ ನಿಟ್ಟಿನಲ್ಲಿ ಒಂಬುಡ್ಸ್ಮನ್ ನೇಮಕ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿ ಮುಜುಗರಕ್ಕೆ ಒಳಗಾದ ಗೃಹಸಚಿವ ವಿ.ಎಸ್.ಆಚಾರ್ಯ, ಒಂಬುಡ್ಸ್ಮನ್ ಮುಗಿದ ಅಧ್ಯಾಯ ಎಂದು ಬುಧವಾರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮ ಧರ್ಮಾಧಿಕಾರಿಯನ್ನು ನೇಮಕ ಮಾಡುವ ವಿಚಾರ ಮುಗಿದ ಅಧ್ಯಾಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯದಲ್ಲಿನ ಇತ್ತೀಚಿನ ಘಟನೆ ಕುರಿತಂತೆ ಮಾಧ್ಯಮಗಳು ಅತಿರಂಜಿತ ವರದಿ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಮಾಧ್ಯಮ ಧರ್ಮಾಧಿಕಾರಿಯನ್ನು ನೇಮಕ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆಚಾರ್ಯ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಸಾಕಷ್ಟು ಟೀಕೆಗೆ ಒಳಗಾಗಿತ್ತಲ್ಲದೇ, ಪಕ್ಷದ ಸಚಿವರೇ ಆಚಾರ್ಯ ಅವರ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಒಂಬುಡ್ಸ್ಮನ್ ಮುಗಿದ ಅಧ್ಯಾಯ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. |