ಪ್ರೇಮಿಗಳ ದಿನಾಚರಣೆಯಂದು ಸೆರೆಸಿಗುವ ಜೋಡಿಗಳಿಗೆ ಮದುವೆ ಮಾಡಿಸುವುದಾಗಿ ಘೋಷಿಸಿದ್ದ ಶ್ರೀರಾಮಸೇನೆ ತನ್ನ ನಿಲುವನ್ನು ಬದಲಾಯಿಸಿದ್ದು, ಶುದ್ಧವಾದ ಪ್ರೀತಿ-ಪ್ರೇಮಕ್ಕೆ ಸೇನೆಯ ವಿರೋಧವಿಲ್ಲ, ಆದರೆ ಪ್ರೇಮ ಹೆಸರಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಸಂಘಟನೆ ಅವಕಾಶ ನೀಡುವುದಿಲ್ಲ ಎಂದು ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ.
ಶ್ರೀರಾಮಸೇನೆ ಕಾನೂನು ಕೈಗೆತ್ತಿಕೊಳ್ಳುವುದಿಲ್ಲ, ವ್ಯಾಲೆಂಟನ್ಸ್ ಡೇ ಆಚರಿಸುವವರನ್ನು ವಿವಾಹ ಬಂಧನಕ್ಕೆ ಒಳಪಡಿಸಲಾಗುವುದು ಎಂಬ ಘೋಷಣೆ ಕೇವಲ ಸಾಂಕೇತಿಕ. ಪಾಲಕರು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಲ್ಲಿ ಜಾಗೃತಿ ಮೂಡಿಸುವುದಷ್ಟೇ ನಮ್ಮ ಜವಾಬ್ದಾರಿ. ಆದರೆ ಸಾರ್ಜಜನಿಕ ಪ್ರದೇಶಗಳಲ್ಲಿ ಅಸಭ್ಯ ಮತ್ತು ಅಶ್ಲೀಲವಾಗಿ ವರ್ತಿಸುವ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೈನಿಕವೊಂದಕ್ಕೆ ತಿಳಿಸಿದ್ದಾರೆ.
ಪ್ರೇಮಿಗಳ ದಿನಾಚರಣೆಗೆ ನಮ್ಮ ವಿರೋಧ. ಇದು ನಮ್ಮ ಸಂಸ್ಕೃತಿ ಅಲ್ಲ, ಪ್ರೀತಿ-ಪ್ರೇಮ ನಿತ್ಯ ನಿರಂತರ. ಇದು ಪವಿತ್ರ ಮತ್ತು ಭಾವನಾತ್ಮಕ ಸಂಬಂಧ. ನಿರ್ದಿಷ್ಟ ದಿನಾಂಕದಲ್ಲಿ ಆಚರಿಸಬೇಕು ಎನ್ನುವುದು ಬಹುರಾಷ್ಟ್ರೀಯ ಕಂಪೆನಿಗಳ ಮಾರುಕಟ್ಟೆ ತಂತ್ರ ಎಂದು ಹೇಳಿದರು.
ಭಾರತದಂಥ ದೊಡ್ಡ ಮಾರುಕಟ್ಟೆಯಲ್ಲಿ ಉಡುಗೊರೆ, ಶುಭಾಷಯ ಪತ್ರ ಮಾರಾಟ ಮಾಡುವ ಬಹುರಾಷ್ಟ್ರೀಯ ಕಂಪೆನಿಗಳ ಇಂಥ ಹುನ್ನಾರದ ಬಗ್ಗೆ ಜಾಗೃತಿ ಮೂಡಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. |