ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ರಾಜ್ಯದ ಘಟಕದ ಅಧ್ಯಕ್ಷರಾಗಿರುವ ಬಂಗಾರಪ್ಪ ಅವರು ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡುವ ಮೂಲಕ ಮತ್ತೊಂದು ಇನಿಂಗ್ಸ್ ಆರಂಭಿಸಿದ್ದಾರೆ.2005 ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸಂಸದರಾಗಿರುವ ಬಂಗಾರಪ್ಪ ಸಮಾಜವಾದಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸೇರುವ ಹಿನ್ನೆಲೆಯಲ್ಲಿ ಸಂಸತ್ ಸ್ಥಾನಕ್ಕೆ ಇಂದು ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ,ಸಮಾಜವಾದಿ ಪಕ್ಷವನ್ನು ತೊರೆದು ರಾಜ್ಯದಲ್ಲಿ ಮತ್ತೆ ಕೈ ಹಿಡಿಯಲು ನಿರ್ಧರಿಸಿರುವ ಎಸ್.ಬಂಗಾರಪ್ಪ ಅವರನ್ನು ಬರಮಾಡಿಕೊಳ್ಳಲು ರಾಜ್ಯ ಕೆಪಿಸಿಸಿ ಕೂಡ ಗ್ರೀನ್ ಸಿಗ್ನಲ್ ನೀಡಿತ್ತು. ಅಲ್ಲದೇ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಕೂಡ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಬಂಗಾರಪ್ಪ ಸೇರ್ಪಡೆ ಖಚಿತವಾಗಿದೆ.ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಂಗಾರಪ್ಪ 1992ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. 1996ರಲ್ಲಿ ಕೆಸಿಪಿಯಿಂದ ಸಂಸತ್‌ಗೆ ಆಯ್ಕೆ, 1999ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆ, 2004ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದರು, ಬಳಿಕ ಬಿಜೆಪಿಯಿಂದ ಮುನಿಸಿಕೊಂಡು ಸೈಕಲ್ ಏರಿದ್ದ ಬಂಗಾರಪ್ಪ ಇದೀಗ ಮತ್ತೆ ಸೈಕಲ್ ಇಳಿದು ಕೈ ಹಿಡಿಯಲು ಹೊರಟಿದ್ದಾರೆ.ಆದರೆ ಸಮಾಜವಾದಿ ಪಕ್ಷ ಮುಲಾಯಂ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಕೆಂಡ ಕಾರುತ್ತಿದ್ದು, ಕಾಂಗ್ರೆಸ್‌ಗೆ ಕೈ ಕೊಡಲು ನಿರ್ಧರಿಸಿದ್ದರೆ, ಇತ್ತ ಸಮಾಜವಾದಿ ಪಕ್ಷದ ಬಂಗಾರಪ್ಪ ಕೈ ಹಿಡಿಯಲು ಹೊರಟಿದ್ದಾರೆ! |