ಅವಮಾನದಿಂದ ನೇಣಿಗೆ ಶರಣಾಗಿರುವ 9ನೇ ವಿದ್ಯಾರ್ಥಿನಿ ಅಶ್ವಿನಿ ಪ್ರಕರಣದ ಆರೋಪಿ ಸಲಾಂ ಆಲಿಯಾಸ್ ಸಲೀಂಗೆ 15ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ವಿರುದ್ಧ ಮೂಲ್ಕಿ ಠಾಣೆಯಲ್ಲಿ 376 (ಅತ್ಯಾಚಾರ), 305 (ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಶ್ವಿನಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶುಕ್ರವಾರ ವೈದ್ಯರು ಮರಣೋತ್ತರ ವರದಿ ನೀಡಲಿದ್ದಾರೆ.
ಮರಣೋತ್ತರ ವರದಿ ನಂತರ ಅಶ್ವಿನಿ ಮೇಲೆ ಅತ್ಯಾಚಾರ ಎಸಗಲಾಗಿತ್ತೆ ಎಂಬುದು ಖಚಿತವಾಗಲಿದೆ. ಮೃತಳ ಮನೆಗೆ ಜಿಲ್ಲಾ ಎಸ್ಪಿ ಸತೀಶ್, ಜಿಲ್ಲಾ ಗುಪ್ತಚರ ವಿಭಾಗದ ಡಿವೈಎಸ್ಪಿ ಜಗನ್ನಾಥ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಮೃತಳ ಸ್ನೇಹಿತೆಯ ಕುಟುಂಬದವರು ಘಟನೆಯ ನಂತರ ಮನೆಖಾಲಿ ಮಾಡಿದ್ದು, ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಅಶ್ವಿನಿ ಹಾಗೂ ಆಕೆಯ ಸಹಪಾಠಿಯನ್ನು ಪುಸಲಾಯಿಸಿ ಖಾಸಗಿ ಬಸ್ಸಿನ ನಿರ್ವಾಹಕ ಸಲೀಂ ಕರೆದುಕೊಂಡು ಹೋಗಿದ್ದ. ಬೆಳ್ತಂಗಡಿ ಸಮೀಪ ಈತ ವಿದ್ಯಾರ್ಥಿನಿಯರ ಜೊತೆ ಇದ್ದಾಗ ಅನುಮಾನಗೊಂಡ ಹಿಂದೂ ಸಂಘಟನೆಗಳು ಮೂಡುಬಿದಿರೆ ಪೊಲೀಸರಿಗೆ ಅವರನ್ನು ಹಿಡಿದುಕೊಟ್ಟಿದ್ದರು. ಘಟನೆ ನಡೆದ ಮರುದಿನ ಅಶ್ವಿನಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. |