ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕನ್ನಡೇತರರಿಗೆ ಟಿಕೆಟ್ ನೀಡುವ ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ನಡು ಬೀದಿಯಲ್ಲಿ ಹೊಡೆಯಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಧಮಕಿ ಹಾಕಿದ್ದಾರೆ.
ನಗರದ ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ವೇದಿಕೆ ಸದಸ್ಯತ್ವದ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ನಿಧಿಗೆ ಕೋಟ್ಯಂತರ ರೂಪಾಯಿ ದೊರೆಯುತ್ತದೆ ಎಂದು ಆಂಧ್ರ, ತಮಿಳುನಾಡಿನವರಿಗೆ ಮಣೆಹಾಕಿದರೆ ಎಚ್ಚರ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ತಾಳಕ್ಕೆ ತಕ್ಕಂತೆ ಕುಣಿಯುವ ಮೂಲಕ ಕನ್ನಡಿಗರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಗ್ರಾಮ ಪಂಚಾಯ್ತಿಯಿಂದ ಲೋಕಸಭೆಯವರೆಗೂ ಕನ್ನಡಿಗನೇ ಮುಖ್ಯವಾಗಬೇಕು. ರಾಷ್ಟ್ರೀಯ ಪಕ್ಷಗಳು ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಪಕ್ಷಗಳು ಬೇರೆ, ಬೇರೆ ರಾಜ್ಯಗಳ ಜನರಿಗೆ ಹಣದಾಸೆಗಾಗಿ ಲೋಕಸಭೆ ಟಿಕೆಟ್ ನೀಡುವ ಮೂಲಕ ರಾಜ್ಯದ ಸಮಸ್ಯೆಗಳತ್ತ ದೃಷ್ಟಿ ಹರಿಸುವವರೇ ಇಲ್ಲ ಎಂಬ ಸ್ಥಿತಿ ಏರ್ಪಟ್ಟಿದೆ. |