ಬಂಗಾರಪ್ಪನವರು ಕಾಂಗ್ರೆಸ್ ಪಕ್ಷಕ್ಕೆ ಬರಲು ತಮ್ಮದೇನೂ ಅಭ್ಯಂತರವಿಲ್ಲ. ತಾನು ಈ ಬಗ್ಗೆ ವಿರೋಧಿಸಿಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಯಾರೂ ಬೇಕಾದರೂ ಬರಬಹುದು ಮತ್ತು ಹೋಗಬಹುದು. ಆದರೆ ಯಾವುದೇ ಷರತ್ತು ಇಟ್ಟುಕೊಂಡು ಇಲ್ಲಿಗೆ ಬರುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಂಗಾರಪ್ಪನವರು ಹಿಂದುಳಿದ ವರ್ಗದ ಬಗ್ಗೆ ಹೊಂದಿರುವ ಕಾಳಜಿ ಹಾಗೂ ಈ ವರ್ಗಕ್ಕೆ ಮಾಡಿರುವ ಕೆಲಸ ಮತ್ತು ಹಿಂದುಳಿದ ನಾಯಕರಾಗಿರುವ ಅವರು ಬಗ್ಗೆ ತಮಗೆ ಗೌರವವಿದೆ ಎಂದು ಅವರು ಹೇಳಿದರು.
ಈ ಬಾರಿ ಗೆಲ್ಲುವ ಅಭ್ಯರ್ಥಿಗೆ ಮತ್ತು ಪಕ್ಷದ ನಿಷ್ಠೆ ಉಳ್ಳವರಿಗೆ ಟಿಕೆಟ್ ನೀಡಲಾಗುವುದು. ಯಾವುದೇ ಒತ್ತಡವಿಲ್ಲದೆ, ಹೆಚ್ಚು ಅರ್ಹರಿಗೆ ಟಿಕೆಟ್ ನೀಡಿದರೆ ಕನಿಷ್ಠ 20 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. |