ಪೊಲೀಸರು, ವಿಶ್ವವಿದ್ಯಾಲಯ ಅಧಿಕಾರಿಗಳು, ಕುಲಪತಿಗಳನ್ನು ಬಳಸಿಕೊಂಡು ಪಕ್ಷ ಬೆಳೆಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದು, ಭಯೋತ್ಪಾದನಾ ವಿರೋಧಿ ಆಂದೋಲನದ ಜಾಗೃತಿ ವಿರುದ್ಧದ ಕಾರ್ಯಪಡೆಯ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಆರ್‌ಸಿ ಕಾಲೇಜು ಆವರಣದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆದ ಲಾಠಿಚಾರ್ಚ್ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶವಿದೆ. ಇದನ್ನು ಪೊಲೀಸರ ಮೂಲಕ ಹತ್ತಿಕ್ಕುವ ಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಧ್ವಜದ ಬಗ್ಗೆ ಅರಿವು ಮೂಡಿಸುವ ಬದಲು ವಿದ್ಯಾರ್ಥಿಗಳ ಕೈಯಲ್ಲಿ ಕೇಸರಿ ಧ್ವಜ ಹಾರಿಸಲು ಬಿಜೆಪಿ ಸರ್ಕಾರ ಪ್ರಯತ್ನ ಮಾಡುತ್ತಿದೆ. ಇದಕ್ಕೆ ನಮ್ಮ ಕಾರ್ಯಕರ್ತರು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಈ ಹೋರಾಟ ನಿಲ್ಲುವುದಿಲ್ಲ, ಬಿಜೆಪಿ ಸರ್ಕಾರ ಭಯೋತ್ಪಾದನಾ ವಿರೋಧಿ ಆಂದೋಲನ ಜಾಗೃತಿ ಹೆಸರಲ್ಲಿ ಕೇಸರೀಕರಣ ಮಾಡಲು ಹೊರಟಿರುವ ಕ್ರಮವನ್ನು ಕೈ ಬಿಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು. |