ಕೇಂದ್ರ ಸರ್ಕಾರ ರೈಲ್ವೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಮುಂದುವರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಿಡಿ ಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಕೋರಿದ್ದ ಯಾವುದೇ ಯೋಜನೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ರೈಲ್ವೆ ಯೋಜನೆಗಳ ಒಟ್ಟು ವೆಚ್ಚದಲ್ಲಿ ಶೇ.50ರಷ್ಟನ್ನು ಭರಿಸಲು ರಾಜ್ಯ ಸರ್ಕಾರ ಸಿದ್ಧವಿದ್ದರೂ ನಮ್ಮ ಯೋಜನೆಗಳನ್ನು ಪರಿಗಣಿಸಿಲ್ಲ ಎಂದು ದೂರಿದರು.
ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಶಿವಮೊಗ್ಗ-ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಸೊಲ್ಲಾಪುರ-ಬೆಂಗಳೂರು ಮಾರ್ಗ, ಹುಬ್ಬಳ್ಳಿ-ಸೊಲ್ಲಾಪುರ ನಡುವೆ ಪ್ಯಾಸೆಂಜರ್ ರೈಲು, ಬಿಜಾಪುರ-ಮೈಸೂರು ವಯಾ ಗದಗ-ಹುಬ್ಬಳ್ಳಿ-ಹಾಸನ, ಬೆಂಗಳೂರು-ಅರಸೀಕೆರೆ ನಡುವೆ ಗೇಜ್ ಪರಿವರ್ತನೆಗಳಿಗೆ ಕೇಂದ್ರ ಮನ್ನಣೆ ನೀಡಿಲ್ಲ ಎಂದವರು ನುಡಿದರು.
ಹೊಸ ಯೋಜನೆಗಳಾದ ಮುಂಬೈ-ನಿಜಾಮುದ್ದೀನ್- ಬೆಂಗಳೂರು ವಯಾ ಕಾಚಿಗುಡ ರೈಲು ಸಂಚಾರದಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದ ಅವರು, ಮುಂಬೈ-ಕಾರವಾರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರುವರೆಗೆ ವಿಸ್ತರಿಸಿದ್ದರೆ ಅನುಕೂಲವಾಗುತ್ತಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
|