ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಲವರನ್ನು ಬಂಧಿಸಿದ್ದು, ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಪ್ರೇಮಿಗಳ ದಿನಾಚರಣೆಗೆ ಶ್ರೀರಾಮ ಸೇನೆ ವಿರೋಧ ವ್ಯಕ್ತಪಡಿಸಿದ ಬೆನ್ನ ಹಿಂದೆಯೇ ಅನೇಕ ಸಂಘಟನೆಗಳು ದಿನಾಚರಣೆಗೆ ಬೆಂಬಲ ಸೂಚಿಸಿವೆ. ಇದರಿಂದಾಗಿ ಕಾನೂನು ಉಲ್ಲಂಘನೆಯಾಗಬಹುದೆಂಬ ದೃಷ್ಟಿಯಿಂದ ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸರು ಅಗತ್ಯ ಕ್ರಮವನ್ನು ಕೈಗೊಂಡಿದ್ದಾರೆ.
ಕಾನೂನು ಉಲ್ಲಂಘನೆ ಆಗದ ರೀತಿಯಲ್ಲಿ ಪ್ರೇಮಿಗಳ ದಿನಾಚರಣೆ ಆಚರಿಸುವುದನ್ನು ಅಡ್ಡಿಪಡಿಸುವ ಅಥವಾ ಶಾಂತಿ, ಸುವ್ಯವಸ್ಥೆ ಕದಡುವ ವ್ಯಕ್ತಿ ಹಾಗೂ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಪೊಲೀಸರಿಗೆ ಸ್ಪಷ್ಟ ಆದೇಶ ನೀಡಿದೆ.
ಈ ಮಧ್ಯೆ, ಸಾರ್ವಜನಿಕ ಸ್ಥಳಗಳಲ್ಲಿ ಸಂಯಮದಿಂದ ವರ್ತಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠ ಪ್ರೇಮಿಗಳಿಗೆ ಕಿವಿಮಾತು ಹೇಳಿದೆ. ಪ್ರೇಮಿಗಳ ದಿನಾಚರಣೆಗೆ ಪೊಲೀಸ್ ರಕ್ಷಣೆ ಒದಗಿಸುವಂತೆ ಸಲ್ಲಿಸಲಾದ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವೇಚ್ಛಾಚಾರಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ, ಪ್ರೀತಿ-ಪ್ರೇಮ ಎಂಬುದು ಪ್ರದರ್ಶನಕ್ಕಿಡುವ ವಸ್ತುವಲ್ಲ ಪ್ರೀತಿ-ಪ್ರೇಮವನ್ನು ರಸ್ತೆಗಳಲ್ಲಿ ಪ್ರದರ್ಶಿಸುವುದು ಸರಿಯಾದ ಕ್ರಮವಲ್ಲಿ ಎಂದು ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ. |