ಭ್ರಷ್ಟಾಚಾರ ಕುರಿತು ತಾವು ಯಾವುದೇ ಒಂದು ಪಕ್ಷ ಅಥವಾ ಈಗಿನ ಸರ್ಕಾರದ ವಿರುದ್ಧ ಮಾತ್ರ ಅಸಮಾಧಾನ ವ್ಯಕ್ತಪಡಿಸಿಲ್ಲ. ಸ್ವಾತಂತ್ರ್ಯಾ ನಂತರ ಆಳ್ವಿಕೆ ನಡೆಸಿದ ಎಲ್ಲಾ ಸರ್ಕಾರಗಳು ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಇತ್ತೀಚೆಗಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದ ಲೋಕಾಯುಕ್ತ ನ್ಯಾ. ಹೆಗ್ಡೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ನಗರದಲ್ಲಿ ಖಾಸಗಿ ಸಮಾರಂಭದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಈಗಿನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರೀತಿಯ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ನನ್ನ ಅಭಿಪ್ರಾಯದಲ್ಲಿ ಇಂದಿನ ಭ್ರಷ್ಟವ್ಯವಸ್ಥೆಗೆ ಎಲ್ಲರೂ ಕಾರಣರಾಗಿದ್ದಾರೆ ಎಂದು ಹೇಳಿದರು.
ಸ್ವಾತಂತ್ರ್ಯ ಬಂದು 60 ವರ್ಷಗಳು ಕಳೆದರೂ ಜನಸಾಮಾನ್ಯರ ಜೀವನ ಮಟ್ಟ ಸುಧಾರಣೆಯಾಗಲಿಲ್ಲ ಎಂದಾದರೆ ಸರ್ಕಾರಗಳು ಯಾವ ರೀತಿ ಕೆಲಸ ಮಾಡಿವೆ ಎಂಬುದು ಗೊತ್ತಾಗುತ್ತದೆ. ಜನರ ಸಹನೆಗೂ ಮಿತಿ ಇದೆ ಎಂದರು. |