ಈ ವರ್ಷ ಹುಬ್ಬಳ್ಳಿ ಹಾಗೂ ಗುಲ್ಬರ್ಗಾದಲ್ಲಿ ಸಿಇಟಿ ಕೌನ್ಸೆಲಿಂಗ್ ಕೇಂದ್ರ ತೆರೆಯಲಾಗಿದ್ದು, ಮುಂದಿನ ವರ್ಷದಿಂದ ಮಂಗಳೂರಿನಲ್ಲಿ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ನಗರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ 2009ನೇ ಸಾಲಿನ ಸಿಇಟಿ ಕೈಪಿಡಿ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ವರ್ಷ ಪ್ರಯೋಗಾತ್ಮಕವಾಗಿ ಎರಡು ಹೊಸ ಕೇಂದ್ರಗಳಲ್ಲಿ ಕೌನ್ಸೆಲಿಂಗ್ ನಡೆಸಬೇಕೆಂಬ ಬೇಡಿಕೆಯಿದ್ದು ಮುಂದಿನ ವರ್ಷ ಅದು ಈಡೇರಲಿದೆ ಎಂದರು.
ರಾಜಧಾನಿಯಿಂದ ದೂರವಿರುವ ಪ್ರದೇಶಗಳ ವಿದ್ಯಾರ್ಥಿಗಳು ಕೌನ್ಸಿಲಿಂಗ್‌ಗೆ ಬೆಂಗಳೂರಿಗೆ ಬರುವುದನ್ನು ತಪ್ಪಿಸಿ ಎಂಬುದು ಪ್ರಾದೇಶಿಕವಾಗಿ ಕೌನ್ಸೆಲಿಂಗ್ ಮಾಡಬೇಕೆಂಬುದು ಬಹಳ ವರ್ಷದ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ ಈ ವರ್ಷ ಪ್ರಾಯೋಗಾತ್ಮಕವಾಗಿ ಹುಬ್ಬಳ್ಳಿ ಮತ್ತು ಗುಲ್ಬರ್ಗಾದಲ್ಲಿ ಕೌನ್ಸೆಲಿಂಗ್ ಮಾಡಲಾಗುವುದು. ಇದರ ಯಶಸ್ಸು ಹಾಗೂ ಉಂಟಾಗಬಹುದಾದ ಸಮಸ್ಯೆಗಳನ್ನು ಗಮನಿಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಾಲಿನಲ್ಲಿ ಅನೇಕ ಹೊಸ ಇಂಜಿನಿಯರ್ ಕಾಲೇಜುಗಳು ಆರಂಭವಾಗುವ ಹಿನ್ನೆಲೆಯಲ್ಲಿ ಇಂಜಿಯರಿಂಗ್ ಸೀಟುಗಳ ಸಂಖ್ಯೆ ಹೆಚ್ಚಳವಾಗಲಿದೆ. ಕಾರವಾರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ಇಂಜಿನಿಯರಿಂಗ್ ಕಾಲೇಜಾಗಿ ಪರಿವರ್ತಿತವಾಗಲು ಎಐಸಿಸಿಟಿ ಅನುಮೋದನೆ ನೀಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. |