ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ನಗರದ ಕಂಟೋನ್‌ಮೆಂಟ್ ರೈಲು ನಿಲ್ದಾಣದಲ್ಲಿ ರೈಲು ತಡೆ ನಡೆಸಿದರು.
ಬಂಗಾರುಪೇಟೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ರೈಲನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ತಡೆದ ಟಿ.ಎ.ನಾರಾಯಣಗೌಡ ಅವರ ನೇತೃತ್ವದ ವೇದಿಕೆಯ ನೂರಾರು ಕಾರ್ಯಕರ್ತರು ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದ ಬಹುದಿನಗಳ ಬೇಡಿಕೆಯಾದ ಮಂಗಳೂರು, ಗುಲ್ಬರ್ಗಾ, ಶಿವಮೊಗ್ಗ, ತಾಳಗುಪ್ಪ, ಕಡೂರು ಸೇರಿದಂತೆ ಹಲವು ರೈಲ್ವೆ ಮಾರ್ಗಗಳನ್ನು ಬಜೆಟ್‌ನಲ್ಲಿ ನಿರ್ಲಕ್ಷ್ಯಿಸಲಾಗಿದೆ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಾರಾಯಣಗೌಡ ಆರೋಪಿಸಿದರು.
ಮಂಗಳೂರು ಹಾಗೂ ಗುಲ್ಬರ್ಗಾ ನೈರುತ್ಯ ರೈಲ್ವೆ ವಿಭಾಗೀಯ ಕಚೇರಿಗಳನ್ನು ಸ್ಥಾಪಿಸಬೇಕೆಂಬ ಸಮಸ್ತೆ ಕನ್ನಡಿಗರ ಬೇಡಿಕೆಯನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದ್ದರೂ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಸಂಸದರು ಕೇಂದ್ರದ ಮೇಲೆ ಒತ್ತಡ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆಪಾದಿಸಿದರು. |