ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವರ ಸಮ್ಮುಖದಲ್ಲೇ ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮದಲ್ಲಿ 8 ಕ್ಕೂ ಅಧಿಕ ಜೋಡಿಗಳ ಬಾಲ್ಯ ವಿವಾಹ ನಡೆದಿದರೂ, ಸಚಿವರು, ಪೊಲೀಸ್ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದರು!
ಇಲ್ಲಿನ ಮುಂಡರಗಿಯಲ್ಲಿ ಸಚಿವ ಶಿವನಗೌಡ ನಾಯಕ ನೇತೃದಲ್ಲಿ ನಡೆದ 501ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಗಣಿ ದೊರೆಗಳಾದ ಸಚಿವ ಜನಾರ್ದನ ರೆಡ್ಡಿ, ಶ್ರೀರಾಮುಲು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಎಂಟು ಅಧಿಕ ಜೋಡಿಗಳು ಅಪ್ರಾಪ್ತ ವಯಸ್ಸಿನವರಾಗಿದ್ದು, ಸಚಿವರು, ಅಧಿಕಾರಿಗಳು ಮೂಕಪ್ರೇಕ್ಷರಾಗುವ ಮೂಲಕ ವಿವಾಹ ಕಾರ್ಯಕ್ರಮ ಸಾಂಗವಾಗಿ ನೆರವೇರಿದೆ.
ಹಸೆಮಣೆ ಏರಿದ ಬಾಲಕ-ಬಾಲಕಿಯರಿಗೆ ನಿಮ್ಮ ವಯಸ್ಸು ಎಷ್ಟು ಎಂದು ಮಾಧ್ಯಮದವರು ಕೇಳಿದರೂ ಕೂಡ ಉತ್ತರ ಹೇಳಲು ತಡಕಾಡುತ್ತಿದ್ದವು. ಮಕ್ಕಳ ಪೋಷಕರೇ ಹಿಂದಿನಿಂದ 14-16ಎಂಬುದಾಗಿ ಕೂಗಿ ಹೇಳುತ್ತಿದ್ದರು!.
ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಚಿವರು, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು ಹಾಜರಿದ್ದರು, ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳನ್ನು ಮಾಧ್ಯಮ ಪ್ರತಿನಿಧಿಗಳು ಸಂಪರ್ಕಿಸಿದರೆ ಉತ್ತರ ನೀಡಲು ನಿರಾಕರಿಸಿದ್ದರು.
|