ರೈಲ್ವೆ ಬಜೆಟ್‌ನಲ್ಲಿ ರಾಜ್ಯದ ನಿರೀಕ್ಷೆ ಎಲ್ಲವೂ ಹುಸಿಯಾಗಿವೆ. ಕೇಂದ್ರ ಸರ್ಕಾರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಸರ್ಕಾರ ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯುಪಿಎ ಮೈತ್ರಿಕೂಟದ ಅಂಗಪಕ್ಷ ಇಲ್ಲದ ಕಾರಣ ಕಳೆದ ಐದು ವರ್ಷಗಳಿಂದ ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ಈ ತಾರತಮ್ಯ ಮತ್ತೆ ರೈಲ್ವೆ ಬಜೆಟ್‌ನಲ್ಲಿ ಪುನರಾವರ್ತನೆ ಆಗಿದೆ. ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಯುಪಿಎ ಅಂಗಪಕ್ಷ ಅಧಿಕಾರದಲ್ಲಿರದಿರಬಹುದು ಆದರೆ ಕರ್ನಾಟಕವು ಭಾರತದ ಒಕ್ಕೂಟ ವ್ಯವಸ್ಥೆಯ ಭಾಗ ಎಂಬುದುನ್ನು ಮರೆಯಬೇಡಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಮುಂಬೈ-ಕಾರವಾರ ರೈಲನ್ನು ಮಂಗಳೂರುವರೆಗೆ ವಿಸ್ತರಿಸುವುದು, ರಾಜಧಾನಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ಮೂಲಕ ಸಂಚರಿಸಬೇಕು. ಇಂಟರ್ಸಿಟಿ ರೈಲ್ವೆ ಸಂಚಾರಕ್ಕೆ ಅನುಮೋದನೆ ಮಾಡಬೇಕೆಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಅಲ್ಲದೆ, ರೈಲ್ವೆ ಯೋಜನೆಗಳಿಗೆ ದೇಶದಲ್ಲಿಯೇ ಅತಿ ಹೆಚ್ಚು ಅನುದಾನವನ್ನು ಕರ್ನಾಟಕ ಭರಿಸುತ್ತಿದೆ. ಆರು ರೈಲ್ವೆ ಯೋಜನೆಗಳ ಒಟ್ಟು ವೆಚ್ಚದಲ್ಲಿ ಶೇ.50ರಿಂದ 67ರಷ್ಟು ಮೊತ್ತವನ್ನು ಭರಿಸುತ್ತಿದೆ. ಹೊಸ ರೈಲ್ವೆ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರ ಸಕ್ರಿಯ ಪಾತ್ರವಹಿಸುತ್ತಿದೆ. ಆದರೂ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕೆಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
|