ಭರ್ತಿಯಾಗದ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆ, ಶೀಘ್ರ ಲಿಪಿಗಾರರು, ಸಹಾಯಕರ ತೀವ್ರ ಕೊರತೆ ಹಾಗೂ ಔಟ್ ಡೇಟೆಡ್ ಲ್ಯಾಪ್‌ಟಾಪ್‌ಗಳ ಬಳಕೆ, ವಸತಿ ಗೃಹಗಳ ಕೊರತೆಯಿಂದಾಗಿ ರಾಜ್ಯ ನ್ಯಾಯಾಲಯದ ವ್ಯವಸ್ಥೆ ಕುಂಠಿತಗೊಂಡಿದೆ ಎಂದು ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘಟನೆಯ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ನ್ಯಾಯಾಂಗ ಅಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವ್ಯಾಜ್ಯಗಳ ತ್ವರಿತ ವಿಲೇವಾರಿಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳುವ ರಾಜ್ಯ ಸರ್ಕಾರ, ನ್ಯಾಯಾಂಗ ಇಲಾಖೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ, ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡರು.
ನ್ಯಾಯಾಂಗ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಾರದ ಸ್ಥಿತಿಯಲ್ಲಿದ್ದಾರೆ. ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅವರು ಧರಣಿ, ಪ್ರತಿಭಟನೆ ಮಾಡಲು ಆಗುವುದಿಲ್ಲ. ಸರ್ಕಾರಿ ನೌಕರರ ರೀತಿಯಲ್ಲಿ ಹೋರಾಟ ಮಾಡಿ ಅಥವಾ ಕೆಲಸಕ್ಕೆ ಬಹಿಷ್ಕಾರ ಹಾಕಿ ಸವಲತ್ತು ಪಡೆಯಲು ಆಗುವುದೂ ಇಲ್ಲ, ಹೀಗಿರುವಾಗ ನಮ್ಮೆಲ್ಲರ ಸಮಸ್ಯೆಗಳನ್ನು ಅರಿತುಕೊಂಡು ಸರ್ಕಾರವೇ ಪರಿಹರಿಸಲು ಮುಂದಾಗಬೇಕು ಎಂದು ಭಿನ್ನವಿಸಿಕೊಂಡರು. |