ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈ ತಿಂಗಳ 25ರೊಳಗೆ ಬಿಡುಗಡೆಗೊಳಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಹೈಕಮಾಂಡ್ ಜೊತೆ ಅಂತಿಮವಾಗಿ ತೀರ್ಮಾನಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಉಡುಪಿ ಹಾಗೂ ಮಂಗಳೂರುಗಳಲ್ಲಿ ಹಲವು ಪ್ರಮುಖ ನಾಯಕರು ಅಭ್ಯರ್ಥಿಯಾಗಲು ಉತ್ಸುಕರಾಗಿದ್ದಾರೆ. ಮಂಗಳೂರಿನಲ್ಲಿ ಜನಾರ್ದನ ಪೂಜಾರಿ, ವೀರಪ್ಪ ಮೊಯಿಲಿ, ವಿನಯಕುಮಾರ್ ಸೊರಕೆ, ಮಂಜುನಾಥ್ ಭಂಡಾರಿ ಮೊದಲಾದವರ ಹೆಸರುಗಳಿವೆ. ಹಾಗೆಯೇ ಉಡುಪಿಯಲ್ಲಿ ಡಿ.ಕೆ. ತಾರಾದೇವಿ, ಜಯಪ್ರಕಾಶ್ ಹೆಗ್ಡೆ, ಬಿ.ಎಲ್. ಶಂಕರ್ ಸೇರಿದಂತೆ ಹಲವರು ಆಸಕ್ತಿ ಹೊಂದಿದ್ದಾರೆ ಎಂದು ಅವರು ತಿಳಿಸಿದರು.
ಆದರೆ ಕ್ಷೇತ್ರಗಳ ಅಭ್ಯರ್ಥಿಗಳ ಅಂತಿಮ ಆಯ್ಕೆ ಹೈಕಮಾಂಡ್ನದ್ದೇ ಆಗಿರುತ್ತದೆ ಎಂದ ಅವರು, ಸಾಧ್ಯವಾದಷ್ಟು ಬೇಗ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ಮಾರ್ಚ್ 5ರ ಒಳಗೆ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದರು. |