ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಸಚಿವೆ ರೇಣುಕ ಚೌಧುರಿ ಅವರ ವಿರುದ್ಧ ಸೋಮವಾರ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ.
ಚೌಧುರಿ ಅವರ ಮಂಗಳೂರು ತಾಲಿಬಾನೀಕರಣಗೊಳ್ಳುತ್ತಿದೆ ಎಂದು ಹೇಳಿಕೆ ನೀಡಿದ್ದು, ಆ ಕಾರಣಕ್ಕಾಗಿ ಮೇಯರ್ ಗಣೇಶ್ ಹೊಸಬೆಟ್ಟು ಸೇರಿದಂತೆ 15ಮಂದಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಭಾರತೀಯ ದಂಡಸಂಹಿತೆ 153, 153ಎ ಹಾಗೂ 505ರ ಅನ್ವಯ ದೂರು ದಾಖಲಿಸಲಾಗಿದೆ.
ಮಂಗಳೂರು ತಾಲಿಬಾನೀಕರಣವಾಗುತ್ತಿದೆ ಎಂದು ಆರೋಪಿಸಿದ ಸಚಿವೆ ಚೌಧುರಿ ವಿರುದ್ಧ ಮಂಗಳೂರಿನ ಮೇಯರ್ ಹಾಗೂ ಇತರರು ಸಲ್ಲಿಸಿದ್ದ ನೋಟಿಸ್‌ಗೆ 3 ದಿನಗಳಾದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸೋಮವಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಭಾನುವಾರ ನ್ಯಾಯವಾದಿ ಪಿ.ಪಿ.ಹೆಗ್ಡೆ ತಿಳಿಸಿದ್ದರು.
ಸಚಿವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಮಂಗಳೂರಿನ ಜನತೆಯ ಕ್ಷಮೆ ಯಾಚಿಸಬೇಕೆಂದು ಮೇಯರ್ ಹಾಗೂ ಇತರರು ತಮಗೆ ವಿನಂತಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆಯೇ ಸಚಿವರಿಗೆ ಇ-ಮೇಲ್ ಮತ್ತು ಫ್ಯಾಕ್ಸ್ ಮೂಲಕ ನೋಟಿಸ್ ಕಳಿಸಿದ್ದರೂ ಚೌಧುರಿ ಉತ್ತರ ನೀಡಿರಲಿಲ್ಲವಾಗಿತ್ತು. |