ಚುನಾವಣೆ ನೀತಿ ಸಂಹಿತೆ ಹೆಸರಲ್ಲಿ ಅಭಿವೃದ್ದಿ ಕೆಲಸ ಸ್ಥಗಿತಗೊಳಿಸುವುದರ ಕುರಿತು ಮರುಚಿಂತನೆ ನಡೆಸಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ 258 ಕೋಟಿ ರೂ. ವೆಚ್ಚದ ನಾನಾ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸದ್ಯ ಸಂಸತ್ ಚುನಾವಣೆ ಘೋಷಣೆ ಆಗಲಿದೆ. ನೀತಿ ಸಂಹಿತೆ ಹೆಸರಲ್ಲಿ ಇನ್ನೂ ಮೂರು ತಿಂಗಳು ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ಸ್ಥಗಿತವಾಗಲಿವೆ. ಇದು ಅನಿವಾರ್ಯ. ಆದರೆ ಈ ಕುರಿತು ಅಮೂಲಾಗ್ರ ಚಿಂತನೆ ನಡೆಸಬೇಕಿದೆ. ನೀತಿ ಸಂಹಿತೆ ಜಾರಿ ಮುನ್ನ ಮಂಜೂರು ದೊರೆತು, ಏಜನ್ಸಿಗಳು ನಿಗದಿಯಾದ ಕಾಮಗಾರಿಗಳನ್ನು ಯಾವುದೇ ಕಾರಣಕ್ಕೂ ತಡೆ ಹಿಡಿಯದೆ ಮುಂದುವರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ನಂತರ ಮಾಚೇನಹಳ್ಳಿ ಕೈಗಾರಿಕೆ ಪ್ರದೇಶದಲ್ಲಿ ಐಟಿ ಪಾರ್ಕ್ ಹಾಗೂ ನವುಲೆಯಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಯಡಿಯೂರಪ್ಪ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಐಟಿ-ಬಿಟಿ ಪಾರ್ಕ್ ಸ್ಥಾಪಿಸಲಾಗುವುದು. ಪ್ರಮುಖ ಸ್ಥಳಗಳಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ನೀಡಲಾಗುವುದು ಎಂದು ಪ್ರಕಟಿಸಿದರು. |