' ಮಂಗಳೂರು ತಾಲಿಬಾನೀಕರಣವಾಗುತ್ತಿದೆ' ಎಂದು ಆರೋಪಿಸಿರುವುದಕ್ಕಾಗಿ ಅಲ್ಲಿನ ಮೇಯರ್ ಗಣೇಶ್ ಹೊಸಬೆಟ್ಟು ಸಹಿತ 15 ಸಂಘ ಸಂಸ್ಥೆಗಳು ತಮ್ಮ ಮೇಲೆ ಕ್ರಿಮಿನಲ್ ಕೇಸು ಹೂಡಿ ಕೋರ್ಟಿಗೆ ಎಳೆದಿರುವುದರ ವಿರುದ್ಧ ಕೆಂಡಾಮಂಡಲವಾಗಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಣುಕಾ ಚೌಧುರಿ, ಇದು ರಾಜಕೀಯ ಪ್ರೇರಿತ ಕ್ರಮವಾಗಿದ್ದು, ಈ ಬಗ್ಗೆ ಇದುವರೆಗೂ ತನಗೆ ಯಾವುದೇ ನೋಟಿಸ್ ತಲುಪಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.ಮಂಗಳೂರಿನಲ್ಲಿ ಅಶಾಂತಿಯ ವಾತಾವರಣವಿದೆ ಎಂಬುದು ವಾಸ್ತವ. ಅಲ್ಲಿ ಶ್ರೀರಾಮ ಸೇನೆಯ ಫ್ಯಾಸಿಸ್ಟ್ ಶಕ್ತಿಗಳು ಪ್ರಾಬಲ್ಯ ಮೆರೆಯುತ್ತಿವೆ. ನನಗೇಕೆ ಅವರು ನೋಟಿಸ್ ಕಳುಹಿಸಬೇಕು? ಈ ರೀತಿ ಮಾಡುವ ಬದಲಾಗಿ, ಗೂಂಡಾ ಶಕ್ತಿಗಳ ವಿರುದ್ಧ ಕರ್ನಾಟಕ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಅವರು ಪ್ರಶ್ನಿಸಿದರು.ಒಟ್ಟಿನಲ್ಲಿ ಇದು ಗಮನ ಬೇರೆಡೆ ಸೆಳೆಯುವ ಮತ್ತು ಪರಿಸ್ಥಿತಿಯ ಗಂಭೀರತೆಯನ್ನು ತಗ್ಗಿಸುವ ಪ್ರಯತ್ನ ಎಂದು ಸಚಿವೆ ರೇಣುಕಾ ಆರೋಪಿಸಿದರು.ಇದಕ್ಕೆ ಮೊದಲು, ರೇಣುಕಾ ಚೌಧುರಿ ಅವರು ಮಂಗಳೂರು ತಾಲಿಬಾನೀಕರಣಗೊಳ್ಳುತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಮಂಗಳೂರು ನಾಗರಿಕರಿಗೆ ಅವಮಾನ ಮಾಡಿದ್ದಾರೆ. ಮಂಗಳೂರಿನ ಪ್ರತಿಷ್ಠೆಗೆ ಮಸಿ ಬಳಿದಿದ್ದಾರೆ. ಅವರು ನಾಗರಿಕರ ಕ್ಷಮೆ ಯಾಚಿಸಬೇಕು ಎಂದು ಮಂಗಳೂರು ಮೇಯರ್ ಗಣೇಶ್ ಹೊಸಬೆಟ್ಟು ಹೇಳಿದ್ದಾರೆ.ರೇಣುಕಾ ಮೇಲೆ ಭಾರತೀಯ ದಂಡ ಸಂಹಿತೆಯ ಪ್ರಕಾರ, ಕೋಮು ಪ್ರಚೋದನೆ, ದೇಶದ ಏಕತೆಗೆ ಭಂಗ ಮತ್ತು ಕೋಮು ಗಲಭೆಗೆ ಚಿತಾವಣೆ ನೀಡುವುದೇ ಮುಂತಾದ ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. |